ಬಂಟ್ವಾಳ, ಎಪ್ರಿಲ್ 08, 2025 (ಕರಾವಳಿ ಟೈಮ್ಸ್) : ರಸ್ತೆ ಬದಿಯ ಗ್ಯಾರೇಜ್ ಬಳಿ ರಿಪೇರಿಗಾಗಿ ಟಿಪ್ಪರ್ ನಿಲ್ಲಿಸಿ ಡೋರ್ ಬಳಿ ನಿಂತಿದ್ದ ಚಾಲಕಗೆ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬಿ ಮೂಡ ಗ್ರಾಮದ ಭಂಡಾರಿಬೆಟ್ಟು ಎಂಬಲ್ಲಿ ಶುಕ್ರವಾರ ಸಂಭವಿಸಿದ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಾಯಗೊಂಡ ಟಿಪ್ಪರ್ ಚಾಲಕನನ್ನು ಮೊಹಮ್ಮದ್ ಹನೀಫ್ ಎಂದು ಹೆಸರಿಸಲಾಗಿದೆ. ಇವರು ಲೊರೆಟ್ಟೊ ನಿವಾಸಿ ಅವಿಲ್ ಕ್ಯಾಸ್ತಲಿನೋ ಅವರಿಗೆ ಸೇರಿದ ಟಿಪ್ಪರ್ ಲಾರಿಯಲ್ಲಿ ಚಾಲಕನಾಗಿ ದುಡಿಯುತ್ತಿದ್ದು, ಶುಕ್ರವಾರ ಭಂಡಾರಿಬೆಟ್ಟುವಿನ ರಾಮಗಣೇಶ್ ಗ್ಯಾರೇಜ್ ಬಳಿ ರಿಪೇರಿ ನಿಮಿತ್ತ ಟಿಪ್ಪರ್ ನಿಲ್ಲಿಸಿ ಬಲಬದಿಯ ಡೋರ್ ಬಳಿ ನಿಂತಿದ್ದಾಗ ಉಸ್ಮಾನ್ ಎಂಬವರು ಚಲಾಯಿಸಿಕೊಂಡು ಬಂದ ಗೂಡ್ಸ್ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಹನೀಫ್ ಅವರ ತಲೆ, ಕೈ-ಕಾಲುಗಳು ಹಾಗೂ ಎದೆಗೆ ಗಾಯಗಳಾಗಿದ್ದು, ತಕ್ಷಣ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment