ನವದೆಹಲಿ, ಎಪ್ರಿಲ್ 17, 2025 (ಕರಾವಳಿ ಟೈಮ್ಸ್) : ಮುಂದಿನ ವಿಚಾರಣೆಯವರೆಗೆ ವಕ್ಫ್ ಮಂಡಳಿಗೆ ಮುಸ್ಲಿಮೇತರರನ್ನು ನೇಮಕ ಮಾಡುವಂತಿಲ್ಲ ಮತ್ತು ವಕ್ಫ್ ಕಾಯ್ದೆ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್ ಗುರುವಾರ ಆದೇಶ ನೀಡಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ 2025ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ಆರಂಭಿಸಿದ್ದು, ಗುರುವಾರವೂ ವಿಚಾರಣೆ ಮುಂದುವರೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಹಾಗೂ ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ 7 ದಿನಗಳ ಕಾಲಾವಕಾಶ ನೀಡಿದೆ.
ಇಷ್ಟು ಅರ್ಜಿಗಳನ್ನು ನಿಭಾಯಿಸುವುದು ಅಸಾಧ್ಯ. ಕೇವಲ 5 ಅರ್ಜಿಗಳನ್ನು ಮಾತ್ರ ಆಲಿಸಲಾಗುವುದು. ಯಾವ ಐದು ಅರ್ಜಿಗಳನ್ನು ವಿಚಾರಣೆ ನಡೆಸಬೇಕು ಎಂಬುದನ್ನು ನೀವೇ ಆಯ್ಕೆ ಮಾಡಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಅರ್ಜಿದಾರರು 5 ದಿನಗಳಲ್ಲಿ ಕೇಂದ್ರದ ಉತ್ತರಕ್ಕೆ ಮರು ಪ್ರತಿಕ್ರಿಯೆ ಸಲ್ಲಿಸಬಹುದು, ನಂತರ ಮಧ್ಯಂತರ ಆದೇಶಗಳಿಗಾಗಿ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಹೇಳಿ, ವಿಚಾರಣೆಯನ್ನು ಮೇ 5ಕ್ಕೆ ಮುಂದೂಡಿದೆ.
ಕೇಂದ್ರ ಸರ್ಕಾರದ ಪರವಾಗಿ ವಿಚಾರಣೆಗೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೆಲವು ಸಾಮಗ್ರಿಗಳೊಂದಿಗೆ ಪ್ರಾಥಮಿಕ ಉತ್ತರ ನೀಡಲು ನನಗೆ ಒಂದು ವಾರ ಸಮಯ ನೀಡಿ ಎಂದು ಸುಪ್ರೀಂ ಕೋರ್ಟ್ ಅನ್ನು ಕೇಳಿಕೊಂಡರು. ಈ ಮಧ್ಯೆ ಕೇಂದ್ರ ವಕ್ಫ್ ಮಂಡಳಿ ಮತ್ತು ಇತರ ಮಂಡಳಿಗಳಲ್ಲಿ ಯಾವುದೇ ನೇಮಕಾತಿ ನಡೆಸಬಾರದು ಎಂದು ಕೇಂದ್ರ ಸರ್ಕಾರ ಸಮಯ ಕೇಳಿದ ನಂತರ ಸುಪ್ರೀಂ ಕೋರ್ಟ್ ಹೇಳಿದೆ.
1995ರ ಕಾಯ್ದೆಯಡಿ ಈಗಾಗಲೇ ನೋಡಿಫೈ ಮಾಡಿದ ಅಥವಾ ನೋಂದಾಯಿಸಲಾದ ಹಾಗೂ ದೀರ್ಘ ಕಾಲದಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಬಳಸುತ್ತಿರುವ (ವಕ್ಫ್ ಬೈ ಯೂಸರ್) ಆಸ್ತಿಗಳನ್ನು ಒಳಗೊಂಡಂತೆ ಯಾವುದೇ ವಕ್ಫ್ ಆಸ್ತಿಗಳನ್ನು ಡಿನೋಟಿಫೈ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು ಅವುಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಬಾರದು ಎಂದು ನ್ಯಾಯಾಲಯ ಸೂಚಿಸಿದೆ.
ಮುಂದಿನ ವಿಚಾರಣೆಯವರೆಗೆ ‘ವಕ್ಫ್ ಬೈ ಡೀಡ್’ ಮತ್ತು ‘ಬಳಕೆದಾರರಿಂದ ವಕ್ಫ್’ ಅನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‍ಗೆ ಭರವಸೆ ನೀಡಿದೆ.
0 comments:
Post a Comment