ಮೈನಾರಿಟಿ ಜುಜುಬಿ ಸ್ಕಾಲರ್ ಶಿಪ್, ಸಹಾಯಧನವನ್ನೇ ನಿಲ್ಲಿಸಿದ ಕೇಂದ್ರ ಸರಕಾರ ವಕ್ಫ್ ಮೂಲಕ ಆರ್ಥಿಕ ಉತ್ತೇಜನ ಮಾಡುತ್ತೇನೆಂಬುದನ್ನು ನಂಬಲು ಮೂರ್ಖರಲ್ಲ : ಲಕ್ಕಿಸ್ಟಾರ್ ಕುಟುಕು
ಮಂಗಳೂರು, ಎಪ್ರಿಲ್ 19, 2025 (ಕರಾವಳಿ ಟೈಮ್ಸ್) : ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ದ ಕರ್ನಾಟಕ ರಾಜ್ಯದಲ್ಲಿ ಮೊದಲ ಜನಚಳುವಳಿಗೆ ಶುಕ್ರವಾರ ಸಂಜೆ ಮಂಗಳೂರಿನಲ್ಲಿ ಚಾಲನೆ ನೀಡಲಾಗಿದೆ.
ಮಂಗಳೂರು ಹೊರವಲಯದ ಅಡ್ಯಾರ್-ಕಣ್ಣೂರು ಷಾ ಗಾರ್ಡನ್ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ಹಾಗೂ ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ಮಾಣಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಅವರುಗಳ ನೇತೃತ್ವದ ಎರಡು ಬಲಿಷ್ಠ ಉಲಮಾ ಸಂಘಟನೆಗಳ ನಾಯಕರುಗಳ ಮುಂದಾಳುತ್ವದಲ್ಲಿ ಕರ್ನಾಟಕ ಉಲಮಾ ಕೋ ಆರ್ಡಿನೇಷನ್ ಕಮಿಟಿ ವತಿಯಿಂದ ‘ವಕ್ಫ್ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿ’ ಎಂಬ ಘೋಷ ವಾಕ್ಯದಡಿ ಹಮ್ಮಿಕೊಳ್ಳಲಾದ ಬೃಹತ್ ಜನ ಸಮಾವೇಶಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಪ್ರವಾಹೋಪಾದಿಯಲ್ಲಿ ಹರಿದು ಬಂದರು.
ಅಪರಾಹ್ನ 3 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮ ಅಸರ್ ನಮಾಝ್ ಬಳಿಕ ಸುಮಾರು 4.30ಕ್ಕೆ ಆರಂಭಗೊಂಡು ಮಗ್ರಿಬ್ ನಮಾಝಿಗೆ ಮುಂಚಿತವಾಗಿ ಕ್ರಮಬದ್ದವಾಗಿ ಕೊನೆಗೊಳಿಸಲಾಗಿತ್ತು. ದೇಶಾದ್ಯಂತ ವಕ್ಪ್ ಮಸೂದೆ ತಿದ್ದುಪಡಿ ವಿರುದ್ದ ಜನ ಬೀದಿಗಿಳಿದಿದ್ದು, ಕರ್ನಾಟಕ ರಾಜ್ಯದಲ್ಲಿ ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾದ ಅತ್ಯಂತ ದೊಡ್ಡ ಮಟ್ಟದ ಪ್ರತಿಭಟನಾ ಸಮಾವೇಶದ ಹಿನ್ನಲೆಯಲ್ಲಿ ಸಮಾವೇಶದ ಸ್ಥಳ ಸಹಿತ ಜಿಲ್ಲೆಯ ವಿವಿಧೆಡೆ ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಸ್ವಯಂ ಸೇವಕರನ್ನು ಸಂಘಟಕರನ್ನು ಅಚ್ಚುಕಟ್ಟಾಗಿ ನಿಯೋಜಿಸಿದ್ದು. ಜನಜಂಗುಳಿ ನಿಯಂತ್ರಿಸುವಲ್ಲಿ ಹಾಗೂ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಪೊಲೀಸರೊಂದಿಗೆ ಸಂಯಮದಿಂದ ಸಹಕರಿಸುತ್ತಿದ್ದುದು ಕಂಡು ಬಂತು. ಭಾರೀ ಸಂಖ್ಯೆಯ ಜನ ಜಮಾಯಿಸಿದ್ದರಿಂದ ಬಿರುಬಿಸಿಲಿನ ಬೇಗೆಗೆ ಜನರ ದಾಹ ನೀಗಿಸಲು ಸಾಕಷ್ಟು ಪ್ರಮಾಣದಲ್ಲಿ ನೀರಿನ ಬಾಟ್ಲಿಗಳನ್ನು ಸರಬರಾಜು ಮಾಡಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕವೂ ಟ್ರಾಫಿಕ್ ಜಾಂನಲ್ಲಿ ಸಿಲುಕಿ ಬಸವಳಿದಿದ್ದ ಇತರ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರಿಗೂ ಸ್ವಯಂ ಸೇವಕರು ಕುಡಿಯುವ ನೀರನ್ನು ಪೂರೈಸುತ್ತಿದ್ದ ದೃಶ್ಯ ರಾತ್ರಿವರೆಗೂ ಕಂಡುಬಂತು.
ಕಾರ್ಯಕ್ರಮ ಉದ್ಘಾಟಿಸಿದ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮಾತನಾಡಿ, ವಕ್ಫ್ ಎಂಬುದು ಮುಸಲ್ಮಾನರ ಹಕ್ಕಾಗಿದ್ದು, ಇದು ಯಾರ ಔದಾರ್ಯವೂ ಅಲ್ಲ, ಯಾರ ಕೊಡುಗೆಯೂ ಅಲ್ಲ, ಮುಸ್ಲಿಮರಿಗಾಗಿ ಪೂರ್ವಜರು ತಮ್ಮ ಸ್ವಂತ ಆಸ್ತಿಯನ್ನು ವಕ್ಫ್ ಮಾಡಿದ ಸೊತ್ತು ಮಾತ್ರವಾಗಿದೆ. ಇದರ ಮೇಲೆ ಓರೆ ಕಣ್ಣು ಓಡಿಸಲು ಫ್ಯಾಶಿಸ್ಟ್ ಶಕ್ತಿಗಳಿಗೆ ಯಾವತ್ತೂ ಅವಕಾಶ ನೀಡಲಾರೆವು. ಈ ಜನಸಾಗರದ ಭೋರ್ಗರೆತ ಆರಂಭ ಮಾತ್ರ. ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದು ಕವಿ ಅಲ್ಲಾಮಾ ಇಕ್ಬಾಲರ ಕವನ ವಾಚನದ ಮೂಲಕ ಎಚ್ಚರಿಕೆ ಕರೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು ಮಾತನಾಡಿ, ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತ ಇಲಾಖೆಯಿಂದ ನೀಡಲಾಗುತ್ತಿದ್ದ ಪ್ರಿಮೆಟ್ರಿಕ್, ಪೋಸ್ಟ್ ಮೆಟ್ರಿಕ್, ಮೌಲಾನಾ ಆಝಾದ್ ಮೊದಲಾದ ವಿದ್ಯಾರ್ಥಿ ವೇತನ, ಸಹಾಯಧನ, ಫೆಲೋಶಿಪ್ ಇವೇ ಮೊದಲಾದ ವಿದ್ಯಾರ್ಥಿ ಪ್ರೋತ್ಸಾಹಕ ಯೋಜನೆಗಳನ್ನೇ ನುಂಗಿ ನೀರು ಕುಡಿದಿರುವ ಕೇಂದ್ರ ಸರಕಾರ ಇನ್ನು ವಕ್ಫ್ ತಿದ್ದುಪಡಿ ಹೆಸರಿನಲ್ಲಿ ಅಲ್ಪಸಂಖ್ಯಾತರ ಆರ್ಥಿಕ ಸಬಲೀಕರಣ ನಡೆಸುತ್ತೇವೆ ಎಂಬುದನ್ನು ನಂಬುವಷ್ಟು ದಡ್ಡರು ನಾವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ಉಲಮಾ ಕೋ-ಆರ್ಡಿನೇಶನ್ ಕಮಿಟಿ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದುವಾಶೀರ್ವಚನಗೈದರು. ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ರಾಜ್ಯ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಶಾಫಿ ಸಅದಿ, ಪ್ರಮುಖರಾದ ಉಸ್ಮಾನ್ ಫೈಝಿ ತೋಡಾರ್, ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ, ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ, ಅಬ್ದುಲ್ ಅಝೀಝ್ ದಾರಿಮಿ ಚೊಕ್ಕಬೆಟ್ಟು, ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ, ರಫೀಕ್ ಹುದವಿ ಕೋಲಾರ, ಅನ್ವರ್ ಅಸ-ಅದಿ ಚಿತ್ರದುರ್ಗ, ಅಬ್ದುಲ್ ಖಾದಿರ್ ದಾರಿಮಿ ಕುಕ್ಕಿಲ, ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಮೊದಲಾದವರು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ ಫ್ಯಾಶಿಸ್ಟ್ ಸಿದ್ದಾಂತಗಳನ್ನು ಸದ್ದಿಲ್ಲದೆ ಹೇರುವುದರ ವಿರುದ್ದ ಗುಡುಗಿದರು.
ಉಲಮಾ ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ರಾಜಕೀಯ ವ್ಯಕ್ತಿಗಳನ್ನು ಸಂಪೂರ್ಣವಾಗಿ ದೂರ ಕಾಪಾಡಲಾಗಿತ್ತು. ರಾಜಕೀಯ ಸಂಬಂಧಿ ವ್ಯಕ್ತಿಗಳನ್ನು ವೇದಿಕೆಗೆ ಆಹ್ವಾನಿಸದೆ ವೇದಿಕೆಯ ಮುಂಭಾಗದಲ್ಲಿ ಸಜ್ಜುಗೊಳಿಸಲಾಗಿದ್ದ ವಿವಿಐಪಿ, ವಿಐಪಿ ಆಸನಗಳಲ್ಲೇ ಕೂರಿಸಿ ಅಚ್ಚುಕಟ್ಟು ಮೆರೆಯಲಾಗಿದ್ದು ವಿಶೇಷವಾಗಿ ಎದ್ದುಕಂಡು ಬಂತು.
ಪ್ರತಿಭಟನಾ ಸಮಾವೇಶದ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಬಹುತೇಕ ಮುಸಲ್ಮಾನ ಬಾಂಧವರು ಅಂಗಡಿ-ಮುಂಗಟ್ಟು, ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡಿ ಜುಮಾ ನಮಾಝ್ ಬಳಿಕ ನೇರವಾಗಿ ಸಮಾವೇಶಕ್ಕೆ ಮೈದಾನಕ್ಕೆ ದಂಡು ದಂಡಾಗಿ ಸಾಗಿ ಬರುತ್ತಿರುವ ದೃಶ್ಯ ಕಂಡುಬಂತು. ಸಮಾವೇಶದಲ್ಲಿ ಬೃಹತ್ ಜನಸಮೂಹವೇ ಸೇರಿದ್ದರಿಂದ ಹೆದ್ದಾರಿಯಲ್ಲಿ ಕೆಲಹೊತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತಾದರೂ ಅಂಬ್ಯುಲೆನ್ಸ್‍ಗಳಂತಹ ತುರ್ತು ವಾಹನಗಳನ್ನು ಸ್ವತಃ ಸ್ವಯಂ ಸೇವಕರೇ ಮುಂದೆ ನಿಂತು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಪ್ರತಿಭಟನಾಕಾರರ ಕೈಯಲ್ಲಿ ರಾಷ್ಟ್ರದ ತ್ರಿವರ್ಣ ಧ್ವಜ ಬಿಟ್ಟರೆ ಇತರ ಯಾವುದೇ ಸಂಘಟನೆಗಳ ಧ್ವಜಕ್ಕೆ ಅವಕಾಶ ಇರಲಿಲ್ಲ. ಸಂಘಟಕರು ಗೊತ್ತುಪಡಿಸಿದ ಕೆಲವೊಂದು ಪ್ಲೇ ಕಾರ್ಡ್, ಘೋಷಣೆ ಬಿಟ್ಟರೆ ಇತರ ಯಾವುದೇ ಉದ್ರೇಕಕಾರಿ ಭಿತ್ತಿಪತ್ರಗಳಿಗಾಗಲೀ, ಘೋಷಣೆಗಳಿಗಾಗಲೀ ಅವಕಾಶ ಇರಲಿಲ್ಲ. ಸಭೆಯ ಮಧ್ಯೆ ಯಾವುದೇ ಘೋಷಣೆ ಕೂಗದಂತೆ ಹಾಗೂ ಕೂಗುವವರ ಜೊತೆ ಸಹಕರಿಸದಂತೆ ಸಂಘಟಕರು ಪದೇ ಪದೇ ಧ್ವನಿವರ್ಧಕ ಮೂಲಕ ಸಂದೇಶ ರವಾನಿಸುತ್ತಿದ್ದರು. ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಮಾಡದಂತೆಯೂ ಕಾಲಕಾಲಕ್ಕೆ ಸಂಘಟಕರು ಪ್ರತಿಭಟನಾಕಾರರಿಗೆ ಸೂಚನೆ ನೀಡುತ್ತಿದ್ದುದು ಕೇಳಿ ಬಂತು.
ರಾಜಕೀಯ, ಸಾಮಾಜಿಕ ವ್ಯಕ್ತಿತ್ವಗಳಾದ ಎಂಎಲ್ಸಿ ಐವನ್ ಡಿ ಸೋಜ, ಮಾಜಿ ಶಾಸಕ ಬಿ ಎ ಮೊಯಿದಿನ್ ಬಾವಾ, ಪ್ರಮುಖರಾದ ಜಿ ಎ ಬಾವಾ, ಇನಾಯತ್ ಅಲಿ, ಯು ಟಿ ಇಫ್ತಿಕಾರ್ ಅಲಿ ಫರೀದ್, ಬಿ ಎಂ ಅಬ್ಬಾಸ್ ಅಲಿ, ರಿಯಾಝ್ ಫರಂಗಿಪೇಟೆ, ಮುಹಮ್ಮದ್ ಕುಂಞÂ, ರಫೀವುದ್ದೀನ್ ಕುದ್ರೋಳಿ, ಕೆ ಅಶ್ರಫ್, ಸುಹೈಲ್ ಕಂದಕ್, ಇಬ್ರಾಹಿಂ ನವಾಝ್, ಕೆ ಕೆ ಶಾಹುಲ್ ಹಮೀದ್, ರಝಾಕ್ ಕುಕ್ಕಾಜೆ, ಹನೀಫ್ ಹಾಜಿ ಗೋಳ್ತಮಜಲು, ಝಕರಿಯ್ಯಾ ಜೋಕಟ್ಟೆ, ಶರೀಫ್ ವೈಟ್ ಸ್ಟೋನ್, ಎಂ ಎ ಗಫೂರ್, ಬಿ ಕೆ ಇಂತಿಯಾಝ್, ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಮೋನು ಮಲಾರ್, ಹನೀಫ್ ಹಾಜಿ ಉಳ್ಳಾಲ, ಹಾಜಿ ಯು ಕೆ ಮೋನು ಕಣಚೂರು, ಎಂ ಎಸ್ ಮುಹಮ್ಮದ್, ರಶೀದ್ ಹಾಜಿ ಉಳ್ಳಾಲ, ಹಾಶೀರ್ ಪೇರಿಮಾರ್ ಮೊದಲಾದವರು ಭಾಗವಹಿಸಿದ್ದರು. ದರ್ಸ್ ವಿದ್ಯಾರ್ಥಿಗಳು ಕ್ರಾಂತಿ ಗೀತೆ ಹಾಡಿದರು. ಕುಕ್ಕಿಲ ದಾರಿಮಿ ನೇತೃತ್ವದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
0 comments:
Post a Comment