ಮಂಗಳೂರು, ಎಪ್ರಿಲ್ 01, 2025 (ಕರಾವಳಿ ಟೈಮ್ಸ್) : ವಿಟ್ಲ ಅಪ್ರಾಪ್ತ ದಲಿತ ಹೆಣ್ಣು ಮಗಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಸಮಗ್ರ ತನಿಖೆ ನಡೆಸಬೇಕು ಹಾಗೂ ಪ್ರಕರಣದ ಆರೋಪಿ ಮಹೇಶ್ ಭಟ್ ಎಂಬಾತನನ್ನು ತಕ್ಷಣ ಬಂಧಿಸುವಂತೆ ಆಲ್ ಇಂಡಿಯಾ ಲಾಯರ್ಸ್ ಎಸೋಸಿಯೇಷನ್ ಪಾರ್ ಜಸ್ಟೀಸ್ (ಎ ಐ ಎಲ್ ಎ ಜೆ) ಆಗ್ರಹಿಸಿದೆ.
ಬಂಟ್ವಾಳ ತಾಲೂಕಿನ ವಿಟ್ಲ ವ್ಯಾಪ್ತಿಯ ಮುರುವ ಎಂಬಲ್ಲಿ ದಲಿತ ಅಪ್ರಾಪ್ತ ಹತ್ತನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬಾತ ಲೈಂಗಿಕ ಕಿರುಕುಳ ಹಾಗೂ ಜಾತಿ ನಿಂದನೆ ಎಸಗಿರುವ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ತಡವಾಗಿ ಜಾತಿ ನಿಂದನೆ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಜನವರಿ 12 ರಂದು ಬಿಜೆಪಿ ಮುಖಂಡ ಮಹೇಶ್ ಭಟ್ ಎಂಬಾತ ತನ್ನ ತೋಟದಲ್ಲಿ ಕೆಲಸ ಮಾಡುವ ದಲಿತ ಕೂಲಿ ಕಾರ್ಮಿಕನ ಮಗಳು ಎಸ್ಸೆಸ್ಸೆಲ್ಸಿ ಓದುತ್ತಿರುವ 16 ವರ್ಷದ ಬಾಲಕಿಗೆ ಆಮಿಷ ಒಡ್ಡಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಈ ಬಗ್ಗೆ ಎಲ್ಲಿಯೂ ಬಾಯಿ ಬಿಡದಂತೆ ಬೆದರಿಕೆಯನ್ನು ಒಡ್ಡಿರುತ್ತಾನೆ ಎಂದು ವರದಿಯಾಗಿದೆ.
ಕಳೆದ ಎರಡು ತಿಂಗಳಿನಿಂದ ಬಾಲಕಿ ಶಾಲೆಗೆ ಹೋಗದಿರುವುದು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೂ ಹಾಜರಾಗದಿರುವುದರಿಂದ ಈ ಕುರಿತು ವಿಚಾರಿಸಲು ಶಾಲೆಯ ಶಿಕ್ಷಕರು ಆಕೆಯ ಮನೆಗೆ ತೆರಳಿದ್ದ ವೇಳೆ, “ಬಾಲಕಿಗೆ ಆರೋಗ್ಯ ಸರಿಯಿಲ್ಲ” ಎಂದು ಹೇಳಿ ಆಕೆಯ ಪೊಷಕರು ಶಿಕ್ಷಕರಿಗೆ ಆಕೆಯನ್ನು ಮಾತಾಡಿಸಲು ಬಿಟ್ಟಿರಲಿಲ್ಲ ಎನ್ನಲಾಗಿದೆ. ಆರಂಭದಲ್ಲಿ ವಿಟ್ಲ ಪೊಲಿಸರು ಸಂತ್ರಸ್ತೆಯ ಮನೆಯವರು ದೂರು ನೀಡಿದರೂ ಎಫ್ ಐ ಆರ್ ದಾಖಲಿಸಿರುವುದಿಲ್ಲ, ಆನಂತರ ಪೊಲಿಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ ಬಳಿಕ ಎಫ್ ಐ ಆರ್ ದಾಖಲಿಸಿದ್ದಾರೆ.
ಮಹೇಶ್ ಭಟ್ ಎಬಾತನಿಂದ ದೌರ್ಜನ್ಯಕ್ಕೊಳಗಾಗಿ ಬಾಲಕಿ ಅಸ್ಥ್ವಸ್ಥಗೊಂಡಿರುವುದು, ಚಿಕಿತ್ಸೆಗಾಗಿ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿರುವುದು ಆಕೆಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಅನುಮಾನಗಳು ಬರುತ್ತಿದೆ. ರಾಜಕೀಯವಾಗಿ ಪ್ರಬಲನಾಗಿರುವ ಆರೋಪಿ ಮಹೇಶ್ ಭಟ್ ಹಾಗೂ ಬಿಜೆಪಿ, ಆರ್ ಎಸ್ ಎಸ್, ಸಂಘ ಪರಿವಾರದ ಬೆದರಿಕೆಗೆ ಒಳಪಟ್ಟು ಹೆತ್ತವರು ಸತ್ಯವನ್ನು ಮುಚ್ಚಿಡುವ ಸಾಧ್ಯತೆಗಳು ಇದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಸರಿಯಾದ ತನಿಖೆ ನಡೆಸಬೇಕೆಂದು ಆಲ್ ಇಂಡಿಯಾ ಲಾಯರ್ಸ್ ಎಸೋಸಿಯೇಷನ್ ಪಾರ್ ಜಸ್ಟೀಸ್ (ಎ ಐ ಎಲ್ ಎ ಜೆ) ಒತ್ತಾಯಿಸಿದೆ.
ಪೊಲೀಸ್ ಇಲಾಖೆ ಸಂತ್ರಸ್ತ ಬಾಲಕಿಯ ಕುಟುಂಬಕ್ಕೆ ರಕ್ಷಣೆ ನೀಡಿ ಪ್ರಕರಣದ ಸರಿಯಾದ ತನಿಖೆ ನಡೆಸಬೇಕು, ಬಾಲಕಿಯ ಮೇಲೆ ನಡೆದಿರುವ ದೌರ್ಜನ್ಯದ ಸಂಪೂರ್ಣ ವಿಷಯವನ್ನು ಬಯಲಿಗೆ ತರಬೇಕು ಹಾಗೂ ತಪ್ಪಿತಸ್ಥ ಆರೋಪಿಯನ್ನು ಯಾವುದೇ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ತಕ್ಷಣ ಬಂಧಿಸಬೇಕು ಎಂದು ಆಲ್ ಇಂಡಿಯಾ ಲಾಯರ್ಸ್ ಎಸೋಸಿಯೇಷನ್ ಪಾರ್ ಜಸ್ಟೀಸ್ (ಎ ಐ ಎಲ್ ಎ ಜೆ) ಆಗ್ರಹಿಸಿದೆ.
0 comments:
Post a Comment