ಬಂಟ್ವಾಳ, ಎಪ್ರಿಲ್ 10, 2025 (ಕರಾವಳಿ ಟೈಮ್ಸ್) : ತಾಲೂಕಿನ ಸಜಿಪಪಡು ಗ್ರಾಮದ ಕೋಟೆಕಣಿ ಸಮೀಪದ ತಲೆಮೊಗರು ಎಂಬಲ್ಲಿ ಜನವಸತಿ ಪ್ರದೇಶದಲ್ಲಿರುವ ಕೋಳಿ ಫಾರಂ ತ್ಯಾಜ್ಯಗಳಿಂದ ಪರಿಸರದ ಮನೆಗಳಲ್ಲಿ ಕಳೆದ ಹಲವು ಸಮಯಗಳಿಂದ ದುರ್ವಾಸನೆ ಹಾಗೂ ನೊಣಗಳ ಹಾವಳಿಯಿಂದ ಆರೋಗ್ಯ ಸಮಸ್ಯೆ ತಲೆದೋರಿದ್ದು, ಈ ಬಗ್ಗೆ ಸೂಕ್ತ ಹಾಗೂ ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಪಂಚಾಯತ್ ಪಿಡಿಒ ವಿರುದ್ದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಜನರ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದೆ ಕಾರ್ಯಾಚರಿಸುತ್ತಿರುವ ಕೋಳಿ ಫಾರಂ ವಿರುದ್ದ ಗ್ರಾಮಸ್ಥರ ಆರೋಗ್ಯದ ದೃಷ್ಟಿಯಿಂದ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಈಗಾಗಲೇ ಸ್ಥಳೀಯ ಪಂಚಾಯತ್ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಗೆ ಹಲವು ಬಾರಿ ದೂರಿಕೊಂಡರೂ ಕ್ರಮ ಜರುಗಿಲ್ಲ. ಈಗಲೂ ಇಲ್ಲಿ ಅದೇ ಪರಿಸ್ಥಿತಿ ಮುಂದುವರಿದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇಲ್ಲಿನ ಕೋಳಿ ಫಾರಂಗೆ ತಾಲೂಕು ಆರೋಗ್ಯ ಇಲಾಖಾಧಿಕಾರಿಗಳು 201-18ರಲ್ಲಿ ಒಂದು ಬಾರಿ ಸ್ಥಳೀಯ ಜನರ ಆರೋಗ್ಯದ ಬಗ್ಗೆ ಎಲ್ಲಾ ಶರ್ತಗಳನ್ನು ಅಳವಡಿಸಿ ನಿರಾಕ್ಷೇಪಣಾ ಪತ್ರ ನೀಡಿದ್ದು, ಬಿಟ್ಟರೆ ಬಳಿಕ ಫಾರಂ ಮಾಲಿಕ ಸ್ಥಳೀಯಾಡಳಿತ ಹಾಗೂ ಆರೋಗ್ಯ ಇಲಾಖೆಯ ಶರ್ತಗಳನ್ನು ಪಾಲಿಸದೆ ಇರುವ ಬಗ್ಗೆ ಪರಿಸರವಾಸಿಗಳ ದೂರಿನ ಮೇರೆಗೆ ಯಾವುದೇ ಅನುಮತಿಯನ್ನು ನವೀಕರಿಸಿಲ್ಲ. ಈ ಬಗ್ಗೆ ಇತ್ತೀಚೆಗೆ ನಡೆದ ಗ್ರಾಮಸಭೆಯಲ್ಲೂ ಗ್ರಾಮಸ್ಥರು ಪಂಚಾಯತ್ ಪಿಡಿಒ ಅವರನ್ನು ತೀವ್ರ ತರಾಟೆಗೆ ಪಡೆದುಕೊಂಡಿದ್ದರು.
ಇಲ್ಲಿನ ಕೋಳಿ ಫಾರಂನಿಂದ ಹೊರಬರುವ ತ್ಯಾಜ್ಯ ಮಿಶ್ರಿತ ನೀರು ಪರಿಸರವಿಡೀ ಹರಿದು ಬಂದು ದುರ್ನಾತ ಬೀರುತ್ತಿದೆ. ಅಲ್ಲದೆ ಇಲ್ಲಿ ಉತ್ಪತ್ತಿಯಾಗುವ ನೊಣ, ಕ್ರಿಮಿ ಕೀಟಗಳು ಪರಿಸರದ ಮನೆಗಳಲ್ಲಿ ಹಿಂಡು-ಹಿಂಡಾಗಿ ಬರುತ್ತಿದ್ದು, ಇಡೀ ಮನೆಗಳು ನೊಣಗಳಿಂದ ತುಂಬಿ ಯಾವುದೇ ಆಹಾರ-ಪದಾರ್ಥಗಳನ್ನು ತಯಾರಿಸುವುದಾಗಲೀ, ತಿನ್ನುವುದಾಗಲೀ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಬಗ್ಗೆ ಪಂಚಾತ್ ಅಧಿಕಾರಿಗಳು ಯಾವುದೇ ಪ್ರಭಾವಕ್ಕೊಳಗಾಗದೆ ಗ್ರಾಮಸ್ಥರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಇಲ್ಲಿನ ನಿಯಮ ಉಲ್ಲಂಘಿಸಿ ಕಾರ್ಯನಿರ್ವಹಿಸುತ್ತಿರುವ ಕೋಳಿ ಫಾರಂನ್ನು ತಕ್ಷಣ ಬಂದ್ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment