ಬಂಟ್ವಾಳ, ಎಪ್ರಿಲ್ 16, 2025 (ಕರಾವಳಿ ಟೈಮ್ಸ್) : ಬಿ ಮೂಡ ಗ್ರಾಮದ ಪರ್ಲಿಯಾ ಸಮೀಪದ ಕೋಡಿಮಜಲ್ ಎಂಬಲ್ಲಿನ ಜನ ವಸತಿ ಪ್ರದೇಶದಲ್ಲಿ ಮಂಗಳವಾರ ಸಂಜೆ ವಿಶೇಷ ರೀತಿಯ ಬೃಹತ್ ಗಾತ್ರದ ಅಪರೂಪದ ಹಾವೊಂದು ಕಂಡು ಬಂದಿದೆ.
ಇಲ್ಲಿನ ಮನೆ ಸಮೀಪ ಮಂಗಳವಾರ ಸಂಜೆ ವೇಳೆ ಮಕ್ಕಳು ಆಟವಾಡುತ್ತಿದ್ದಾಗ ಮನೆಯೊಂದರ ಆವರಣ ಗೋಡೆಯ ಮೇಲೆ ಈ ಬೃಹತ್ ಗಾತ್ರದ ಅಪರೂಪ ಹಾಗೂ ವಿಶೇಷ ರೀತಿಯ ಹಾವು ಹರಿದಾಡುತ್ತಿರುವುದನ್ನು ಮಕ್ಕಳು ಗಮನಿಸಿದ್ದಾರೆ. ಹಾವನ್ನು ನೋಡಿ ಭಯಭೀತರಾದ ಮಕ್ಕಳು ಊರವರಿಗೆ ಸುದ್ದಿ ತಲುಪಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಸ್ಥಳೀಯ ನಿವಾಸಿಗಳು ಬಂದು ನೋಡಿದ್ದು, ಹಾವಿನ ವಿಶೇಷತೆ ಕಂಡು ಅವಾಕ್ಕಾಗಿದ್ದಾರೆ. ಹಾವಿನ ಜಾತಿ ಪರೀಕ್ಷಿಸುವ ಉದ್ದೇಶದಿಂದ ತಕ್ಷಣ ಉರಗ ತಜ್ಞರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಯಿಸಲಾಯಿತಾದರೂ ಅಷ್ಟರಲ್ಲಿ ಹಾವು ಸಮೀಪದ ತೋಟದೊಳಗೆ ನುಸುಳಿ ಕಣ್ಮರೆಯಾಗಿದೆ.
ಈ ಪ್ರದೇಶದಲ್ಲಿ ತೋಟ ಇದ್ದು, ಮುಳ್ಳು ಹಂದಿ, ನಾಗರ ಹಾವು, ಹೆಬ್ಬಾವು ಮೊದಲಾದ ಪ್ರಾಣಿಗಳು ಓಡಾಡುವುದು ಸಾಮಾನ್ಯವಾಗಿ ಇಲ್ಲಿನ ಜನ ಗಮನಿಸಿದ್ದಾರೆ. ಆದರೆ ಈ ರೀತಿಯ ವಿಶೇಷ ತರಹದ ಹಾವನ್ನು ಇದೇ ಮೊದಲ ಬಾರಿಗೆ ನೋಡಿರುವುದಾಗಿ ಸ್ಥಳೀಯರು ಹೇಳಿಕೊಂಡಿದ್ದಾರೆ. ಮೇಲ್ಭಾಗದಲ್ಲಿ ಕಪ್ಪು ಬಣ್ಣ ಹಾಗೂ ಅಡಿ ಭಾಗದಲ್ಲಿ ಹಳದಿ ಬಣ್ಣದಿಂದ ಕೂಡಿದ ವಿಶೇಷ ಹಾವಿನ ಸಂಚಾರದಿಂದÀ ಇದೀಗ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರ ಸಹಿತ ಸ್ಥಳೀಯ ಮಕ್ಕಳು ಭೀತಿ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಪ್ರದೇಶದಲ್ಲಿದ್ದ ಸಣ್ಣ ನಾಯಿಮರಿಗಳು ಕಾಣೆಯಾಗಿದ್ದು, ಇದೇ ಹಾವು ನುಂಗಿರುವ ಸಾಧ್ಯತೆ ಬಗ್ಗೆ ಸ್ಥಳೀಯರು ಅಭಿಪ್ರಾಯಪಡುತ್ತಿದ್ದಾರೆ.
0 comments:
Post a Comment