ಉಪ್ಪಿನಂಗಡಿ, ಎಪ್ರಿಲ್ 17, 2025 (ಕರಾವಳಿ ಟೈಮ್ಸ್) : ನೆಲ್ಯಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ 2 ಸೋಲಾರ್ ಬೀದಿ ದೀಪ ಕಳವಾಗಿರುವ ಬಗ್ಗೆ ಪಂಚಾಯತ್ ಪಿಡಿಒ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೆಲ್ಯಾಡಿ ಪಂಚಾಯತ್ ಪಿಡಿಒ ಮೋಹನ್ ಕುಮಾರ್ ಜಿ ಅವರು ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ನೆಲ್ಯಾಡಿ ಗ್ರಾಮ ಪಂಚಾಯತ್ ವತಿಯಿಂದ 2023-24ನೇ ಸಾಲಿನಲ್ಲಿ 15ನೇ ಹಣಕಾಸು ಯೋಜನೆಯಡಿ ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಅಂಗನವಾಡಿ ಕೇಂದ್ರದ ಬಳಿ ಹಾಗೂ ಕಲ್ಲಚೆಡವು ಎಂಬಲ್ಲಿ ಸಾರ್ವಜನಿಕರ ಸಂಚಾರದ ಹಿತದೃಷ್ಟಿಯಿಂದ 2024 ರ ಅಕ್ಟೋಬರ್ 30 ರಂದು 2 ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿತ್ತು. ಎಪ್ರಿಲ್ 22 ರಂದು ಬೆಳಿಗ್ಗೆ 10.30 ಗಂಟೆಗೆ ಪಡುಬೆಟ್ಟು ಅಂಗನವಾಡಿ ಕೇಂದ್ರದ ಬಳಿ ಹಾಗೂ ಕಲ್ಲಚೆಡವು ಎಂಬಲ್ಲಿ ಅಳವಡಿಸಿದ 2 ಸೋಲಾರ್ ಬೀದಿ ದೀಪಗಳು ಕಳವಾದ ಬಗ್ಗೆ ಪಡುಬೆಟ್ಟು ವಾರ್ಡ್ ಸದಸ್ಯರೂ, ಪ್ರಸ್ತುತ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆಗಿರುವ ಯಾಕೂಬ್ ಯು ಯಾನೆ ಸಲಾಮ್ ಬಿಲಾಲ್ ಅವರು ಕರೆ ಮಾಡಿ ತಿಳಿಸಿದ ಹಿನ್ನಲೆಯಲ್ಲಿ ಪರಿಶೀಲನೆ ನಡೆಸಿದಾಗ ಸೋಲಾರ್ ಬೀದಿ ದೀಪಗಳು ಕಳವಾಗಿರುವುದು ತಿಳಿದು ಬಂದಿದೆ. ಕಳವಾದ 2 ಸೋಲಾರ್ ಬೀದಿ ದೀಪಗಳ ಮೌಲ್ಯ 25 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment