ಬಂಟ್ವಾಳ, ಎಪ್ರಿಲ್ 08, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಕೆಲವೆಡೆ ಹಾನಿ ಸಂಭವಿಸಿದೆ.
ನೆಟ್ಲಮುಡ್ನೂರು ಗ್ರಾಮದ ನೇರಳಕಟ್ಟೆ ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ತೆಂಗಿನ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದ್ದು ಸ್ಕೂಟರ್ ಸವಾರನೋರ್ವ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಸ್ಕಾಂ ಇಲಾಖೆ ಸ್ಥಳೀಯರ ಸಹಕಾರದಿಂದ ತೆರವುಗೊಳಿಸಿದ್ದು, ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ.
ಬಾಳ್ತಿಲ ಗ್ರಾಮದ ನಿವಾಸಿ ಬೇಬಿ ಕೋಂ ಕಿಟ್ಟು ನಲ್ಕೆ ಅವರ ವಾಸ್ತವ್ಯದ ಮನೆಯ ಶೀಟು ಛಾವಣಿಗೆ ಮಳೆ ಗಾಳಿಯಿಂದ ಹಾನಿ ಸಂಭವಿಸಿದೆ. ನಾವೂರು ಗ್ರಾಮದ ಸುಲ್ತಾನ್ ಕಟ್ಟೆ ನಿವಾಸಿ ಮಹಮ್ಮದ್ ಇಸಾಕ್ ಬಿನ್ ಇಬ್ರಾಹಿಂ ಅವರ ವಾಸ್ತವ್ಯದ ಮನೆಗೆ ಹಾನಿ ಸಂಭವಿಸಿದೆ. ನಾವೂರು-ಮೈಂದಾಲ ನಿವಾಸಿ ಇಲ್ಯಾಸ್ ಬಿನ್ ಅಹ್ಮದ್ ಬ್ಯಾರಿ ಅವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ಮೈಂದಾಲ ನಿವಾಸಿ ಮೇರಿ ಡಿಸೋಜ ಕೋಂ ಜೋಸೆಫ್ ಡಿಸೋಜ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ನಾವೂರು ನಿವಾಸಿ ಗಿರಿಜಾ ಕೋಂ ಕರಿಂಜ ಅವರ ಮನೆ ಮೇಲ್ಛಾವಣಿಗೆ ಹಾನಿ ಸಂಭವಿಸಿದೆ. ಬಾಳ್ತಿಲ ಗ್ರಾಮದ ಮುಗೇರಪಡ್ಪು ನಿವಾಸಿ ಯಶೋಧ ಎಂಬವರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿ ಸಂಭವಿಸಿದೆ. ಅಮ್ಟಾಡಿ ಗ್ರಾಮದ ಕಲಾಯಿ ನಿವಾಸಿ ನೋಣಯ ಬಿನ್ ಮೋನಪ್ಪ ಎಂಬವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ.
ಕೆಲವೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಸುಮಾರು ಮುಕ್ಕಾಲು ಗಂಟೆಗೂ ಅಧಿಕ ಕಾಲ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ವಾಹನ ಸಂಚಾರ ಹಾಗೂ ಜನಜೀವನ ಕೆಲ ಕಾಲ ಅಸ್ತವ್ಯಸ್ತಗೊಂಡಿತ್ತು.
0 comments:
Post a Comment