ಪುತ್ತೂರು, ಎಪ್ರಿಲ್ 17, 2025 (ಕರಾವಳಿ ಟೈಮ್ಸ್) : ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಜಾತ್ರೆಯೆ ದೇವರ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತಾಯಿಯ ಹೆಗಲ ಮೇಲಿದ್ದ ಮೂರೂವರೆ ವರ್ಷದ ಪುತ್ರಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಅಪರಿಚಿತನೋರ್ವ ಎಗರಿಸಿದ ಘಟನೆ ಬುಧವಾರ ಸಂಜೆ ಸಂಭವಿಸಿದೆ.
ಬಂಟ್ವಾಳ ತಾಲೂಕು, ಪುಣಚ ಗ್ರಾಮದ ಮೂಡಾಯಿಬೆಟ್ಟು ನಿವಾಸಿ ಚಂದ್ರಶೇಖರ ನಾಯ್ಕ (42) ಅವರು ಬುಧವಾರ ಸಂಜೆ ಸುಮಾರು 4 ಗಂಟೆಗೆ ತನ್ನ ಹೆಂಡತಿ ಶ್ರೀಮತಿ ಶ್ರುತಿ ಹಾಗೂ ಮೂರುವರೆ ವರ್ಷ ಪ್ರಾಯದ ಮಗಳು ಪರಿಣಿತ ಅವರೊಂದಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ದಾನದ ಜಾತ್ರೋತ್ಸವಕ್ಕೆ ತೆರಳಿದ್ದು, ಅಲ್ಲಿ ದೇವರ ದರ್ಶನ ಪಡೆದ ಬಳಿಕ ಸಂಜೆ ಸುಮಾರು 6:45 ರ ವೇಳೆಗೆ ದೇವರ ಗದ್ದೆಯಲ್ಲಿನ ಸಂತೆಗೆ ಹೋದಾಗ ಇವರ ಪತ್ನಿ ಮಗಳನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿದ್ದರು. ಈ ಸಂದರ್ಭ ಅಪರಿಚಿತ ವ್ಯಕ್ತಿಯೋರ್ವ ಹೆಂಡತಿಯನ್ನು ಹಿಂಬಾಲಿಸಿಕೊಂಡು ಬಂದು, ಮಗುವಿನ ಕುತ್ತಿಗೆಗೆ ಕೈಹಾಕಿ ಕುತ್ತಿಗೆಯಲ್ಲಿ ಧರಿಸಿದ್ದ ಪೆಂಡೆಂಟ್ ಇದ್ದ ಸುಮಾರು 8 ಗ್ರಾಂ ತೂಕದ ಚಿನ್ನದ ಸರವನ್ನು ಎಗರಿಸಿ ಓಡಿ ಹೋಗಿದ್ದಾನೆ. ಆತನನ್ನು ಚಂದ್ರಶೇಖರ ಅವರು ಹಿಂಬಾಲಿಸಿದಾಗ ಕೊಲ್ಲುವುದಾಗಿ ಬೆದರಿಕೆ ಹಾಕಿ ಜನರ ಮದ್ಯದಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ. ಆರೋಪಿಯು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಹಾಗೂ ಬಿಳಿ ಬಣ್ಣದ ಉದ್ದ ಗೆರೆಗಳಿರುವ ಉದ್ದ ತೋಳಿನ ಶರ್ಟ್ ಧರಿಸಿರುತ್ತಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸುಲಿಗೆಯಾದ ಚಿನ್ನದ ಸರದ ಮೌಲ್ಯ 40 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment