ಬಂಟ್ವಾಳ, ಎಪ್ರಿಲ್ 20, 2025 (ಕರಾವಳಿ ಟೈಮ್ಸ್) : ಚಾಲಕನ ನಿಯಂತ್ರಣ ಮೀರಿ ದ್ವಿಚಕ್ರ ವಾಹನ ರಸ್ತೆ ಬದಿಯ 10 ಅಡಿ ಆಳದ ಗುಂಡಿಗೆ ಬಿದ್ದು ಸವಾರ ತಂದೆ ಮೃತಪಟ್ಟು, ಸಹಸವಾರ ಪುತ್ರ ಗಾಯಗೊಂಡ ಘಟನೆ ತಾಲೂಕಿನ ಪಿಲಾತಬೆಟ್ಟು ಗ್ರಾಮದ ನಿನ್ಯಾರು ಎಂಬಲ್ಲಿ ಶನಿವಾರ ಸಂಭವಿಸಿದೆ.
ಮೃತ ದ್ವಿಚಕ್ರ ವಾಹನ ಸವಾರನನ್ನು ಬಿಹಾರ ಮೂಲದ ಎಂ ಡಿ ಸಂಶದ್ ಎಂದು ಹೆಸರಿಸಲಾಗಿದ್ದು, ಗಾಯಾಳು ಸಹಸವಾರನನ್ನು ಅವರ ಪುತ್ರ ಅತಬುಲ್ (17) ಎಂದು ಹೆಸರಿಸಲಾಗಿದೆ. ಬಿಹಾರ ಮೂಲದವರಾದ ಇವರು ಪಿಲಾತಬೆಟ್ಟು ಗ್ರಾಮದ ನಿನ್ಯಾರು ಎಂಬಲ್ಲಿರುವ ಜಯರಾಂ ಭಟ್ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಶನಿವಾರ ದ್ವಿಚಕ್ರ ವಾಹನದಲ್ಲಿ ರಬ್ಬರ್ ತೋಟಕ್ಕೆ ಕೆಲಸಕ್ಕೆ ಹೋಗಿದ್ದವರು ಕೆಲಸ ಮುಗಿಸಿ ವಾಪಾಸು ಜಯರಾಂ ಅವರ ಮನೆ ಕಡೆಗೆ ಬರುತ್ತಿದ್ದ ವೇಳೆ ಮನೆಯ ಕಡೆಗೆ ಹೋಗುವ ಇಳಿಮುಖ ರಸ್ತೆಯಲ್ಲಿ ಹೋಗುತ್ತಿದ್ದಂತೆ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಯಿಂದ ಸುಮಾರು 10 ಅಡಿ ತಗ್ಗಿನಲ್ಲಿರುವ ಜಯರಾಂ ಭಟ್ ಅವರ ಮನೆಯ ಹಿಂಭಾಗಕ್ಕೆ ಉರುಳಿ ಬಿದ್ದಿದೆ. ಈ ಸಂದರ್ಭ ಸಹಸವಾರ ಪುತ್ರ ಸ್ಕೂಟರಿನಿಂದ ಹಾರಿ ಬಿದ್ದಿದ್ದು, ತಂದೆ ಎಂ ಡಿ ಸಂಶದ್ ವಾಹನ ಸಮೇತ ಗುಂಡಿಗೆ ಬಿದ್ದಿದ್ದಾರೆ.
ಅಪಘಾತದಿಂದ ಗಂಭೀರ ಗಾಯಗೊಂಡ ಸಂಶದ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಪುತ್ರ ಅತಬುಲ್ ಅವರಿಗೆ ಕೆನ್ನೆಗೆ ಹಾಗೂ ಕಾಲಿಗೆ ಗಾಯಗಳಾಗಿರುತ್ತದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment