ಬಂಟ್ವಾಳ, ಎಪ್ರಿಲ್ 04, 2025 (ಕರಾವಳಿ ಟೈಮ್ಸ್) : ಪಕ್ಷ ವಿರೋಧಿ ಚಟುವಟಿಕೆ ಆರೋಪದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಮೂವರು ಸದಸ್ಯರುಗಳನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಶುಕ್ರವಾರ ಆದೇಶಿಸಿದ್ದಾರೆ.
ಮುಹಮ್ಮದ್ ಮಂಚಿ, ರಾಜೇಶ್ ಬಾರೆಬೆಟ್ಟು ಹಾಗೂ ಎ ಬಿ ಅಬ್ದುಲ್ಲ ಆವರುಗಳೇ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರುಗಳು. ಈ ಮೂವರು ಪದೇ ಪದೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಕೊಳ್ನಾಡು ವಲಯ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಜಿಲ್ಲಾಧ್ಯಕ್ಷರಿಗೆ ನೀಡಿದ ದೂರಿನ ಆಧಾರದಲ್ಲಿ ಈ ಬಗ್ಗೆ ತನಿಖೆ ನಡೆಸಲು ಜಿಲ್ಲಾಧ್ಯಕ್ಷರು ಮಹಾಬಲ ಮಾರ್ಲ, ಅಬ್ದುಲ್ ಸಲೀಂ ಹಾಗೂ ಎ ಸಿ ವಿನಯರಾಜ್ ಅವರನ್ನೊಳಗೊಂಡ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು. ಸಮಿತಿ ಸದಸ್ಯರು ಕೊಳ್ನಾಡು ಹಾಗೂ ವಿಟ್ಲಪಡ್ನೂರು ವಲಯ ಕಾಂಗ್ರೆಸ್ ಸಮಿತಿಯ ಸದಸ್ಯರುಗಳ ಸಭೆ ನಡೆಸಿದ್ದರು. ಸಭೆಯಲ್ಲಿ ಈ ಮೂವರು ಪಂಚಾಯತ್ ಹಾಗೂ ಸೊಸೈಟಿ ಚುನಾವಣೆಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ದ ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಬಗ್ಗೆ ಕಾರ್ಯಕರ್ತರು ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಸಮಿತಿ ಪರಿಶೀಲನಾ ವರದಿ ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಈ ಉಚ್ಚಾಟನೆ ಆದೇಶ ಹೊರಡಿಸಿದ್ದಾರೆ.
ಉಚ್ಚಾಟನೆ ಪ್ರಕಾರ ಈ ಮೂವರು ಆರು ವರ್ಷಗಳವರೆಗೆ ಪಕ್ಷದ ಹೆಸರು ಅಥವಾ ಚಿಹ್ನೆಗಳನ್ನು ಬಳಸಿ ಯಾವುದೇ ಸಭೆಗಳನ್ನು ನಡೆಸದಂತೆ ಆದೇಶಿಸಲಾಗಿದೆ.
ಕಳೆದ ತಿಂಗಳು ಇದೇ ಕಾರಣಕ್ಕೆ ಇರಾ ಪಂಚಾಯತ್ ಅಧ್ಯಕ್ಷ ಉಚ್ಛಾಟನೆ
ಕಳೆದ ತಿಂಗಳು ಇದೇ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಎಂ ಬಿ ಉಮ್ಮರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ ಆರು ವರ್ಷಗಳವರೆಗೆ ಉಚ್ಛಾಟಿಸಿ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ ಅವರು ಆದೇಶ ಹೊರಡಿಸಿದ್ದರನ್ನು ಈ ಸಂಸರ್ಭ ಸ್ಮರಿಸಿಕೊಳ್ಳಬಹುದು.
0 comments:
Post a Comment