ಬೆಂಗಳೂರು, ಎಪ್ರಿಲ್ 08, 2025 (ಕರಾವಳಿ ಟೈಮ್ಸ್) : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ದ್ವಿತೀಯ ಪಿಯುಸಿ ಪರೀಕ್ಷೆ -1 ರ ಫಲಿತಾಂಶಗಳನ್ನು ಮಂಗಳವಾರ ಪ್ರಕಟಿಸಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇಕಡಾವಾರು 73.45 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಕಳೆದ ವರ್ಷದ ಶೇಕಡಾ 81.15ಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಶೇ. 7.7 ರಷ್ಟು ಕುಸಿತ ಕಂಡಿದೆ. ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತ್ಯುತ್ತಮ ಸ್ಥಾನ ಗಳಿಸಿದ್ದು, ಮತ್ತೊಮ್ಮೆ, ಹುಡುಗಿಯರೇ ಮೂರು ವಿಭಾಗಗಳಲ್ಲಿಯೂ ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮೂರೂ ವಿಭಾಗಗಳಲ್ಲಿಯೂ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಸಾಧನೆ ಮಾಡಿದ್ದಾರೆ. ಈ ವರ್ಷ ಅತಿ ಹೆಚ್ಚು ಅಂಕ ಗಳಿಸಿದವರು ಎಲ್ಲರೂ ವಿದ್ಯಾರ್ಥಿನಿಯರೇ ಆಗಿದ್ದಾರೆ. ಬಳ್ಳಾರಿಯ ಎಲ್.ಆರ್. ಸಂಜನಾ ಬಾಯಿ 597 ಅಂಕಗಳೊಂದಿಗೆ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ದಕ್ಷಿಣ ಕನ್ನಡದ ದೀಪಶ್ರೀ ಎಸ್ 599 ಅಂಕಗಳೊಂದಿಗೆ ವಾಣಿಜ್ಯ ವಿಭಾಗದಲ್ಲಿ ಮತ್ತು ದಕ್ಷಿಣ ಕನ್ನಡದವರೇ ಆದ ಅಮೂಲ್ಯ ಕಾಮತ್ ವಿಜ್ಞಾನ ವಿಭಾಗದಲ್ಲಿ 599 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಮರು ಮೌಲ್ಯಮಾಪನ ಮತ್ತು ಮರು ಎಣಿಕೆ
ದ್ವಿತೀಯ ಪಿಯುಸಿ ಪರೀಕ್ಷೆ-1 ರ ಫಲಿತಾಂಶಗಳನ್ನು ಆಯಾ ಕಾಲೇಜುಗಳಿಗೆ ಕೆಎಸ್‍ಇಎಬಿ ಪಿಯು ಪರೀಕ್ಷಾ ಪೆÇೀರ್ಟಲ್ ಮೂಲಕ ಲಭ್ಯವಾಗುವಂತೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಪಡೆಯಲು ಎಪ್ರಿಲ್ 8 ರಿಂದ 13 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಪ್ರತಿಗಳನ್ನು ಎಪ್ರಿಲ್ 12 ರಿಂದ 16ರ ನಡುವೆ ಡೌನ್‍ಲೋಡ್ ಮಾಡಿಕೊಳ್ಳಬಹುದು. ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸುವ ಸಮಯ ಎಪ್ರಿಲ್ 12 ರಿಂದ ಎಪ್ರಿಲ್ 17 ರವರೆಗೆ ತೆರೆದಿರುತ್ತದೆ.
ಸ್ಕ್ಯಾನ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂಪಾಯಿ, ಮರು ಮೌಲ್ಯಮಾಪನಕ್ಕೆ ಪ್ರತಿ ವಿಷಯಕ್ಕೆ 1,670 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ. ಮರು ಎಣಿಕೆ ಉಚಿತವಾಗಿರುತ್ತದೆ.
ಪರೀಕ್ಷೆ-2 ಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಫಲಿತಾಂಶಗಳಿಗಾಗಿ ಕಾಯಬೇಕಾಗಿಲ್ಲ. ಪರೀಕ್ಷೆ-1 ಕ್ಕೆ ಮರು ಮೌಲ್ಯಮಾಪನ ಅಂಕಗಳನ್ನು ಅಂತಿಮವೆಂದು ಪರಿಗಣಿಸಲಾಗುತ್ತದೆ ಮತ್ತು ಮರು ಮೌಲ್ಯಮಾಪನ ಸಮಿತಿಯ ನಿರ್ಧಾರಕ್ಕೆ ಬದ್ಧವಾಗಿರುತ್ತದೆ. ಮರು ಮೌಲ್ಯಮಾಪನ ಮತ್ತು ಮರು ಎಣಿಕೆ ಫಲಿತಾಂಶಗಳನ್ನು ಇಲಾಖಾ ವೆಬ್ ಸೈಟಿನಲ್ಲಿ ಘೋಷಿಸಲಾಗುತ್ತದೆ.
ಪರೀಕ್ಷೆ-2 ರ ನೋಂದಣಿ ಪ್ರಾರಂಭ
ಕಾಲೇಜುಗಳು ಎಪ್ರಿಲ್ 8 ರಿಂದ 15 ರವರೆಗೆ ಪರೀಕ್ಷೆ-2 ರ ಪುನರಾವರ್ತಕ, ಮತ್ತು ಮರು ಮೌಲ್ಯಮಾಪನ ಬಯಸುವ ವಿದ್ಯಾರ್ಥಿಗಳ ವಿವರಗಳನ್ನು ದಂಡವಿಲ್ಲದೆ ಅಪ್‍ಲೋಡ್ ಮಾಡಲು ಪ್ರಾರಂಭಿಸಬಹುದು. ಶುಲ್ಕ ಪಾವತಿ ಮತ್ತು ಅರ್ಜಿ ನಮೂನೆಗಳನ್ನು ದಂಡವಿಲ್ಲದೆ ಡಿಡಿಪಿಯು ಕಚೇರಿಗೆ ಸಲ್ಲಿಸಲು ಎಪ್ರಿಲ್ 16 ಕೊನೆಯ ದಿನಾಂಕವಾಗಿದೆ. ತಡವಾದ ಶುಲ್ಕದೊಂದಿಗೆ, ನೋಂದಣಿ ವಿಂಡೋ ಎಪ್ರಿಲ್ 16 ಮತ್ತು 17 ರವರೆಗೆ ತೆರೆದಿರುತ್ತದೆ, ಅಂತಿಮ ಸಲ್ಲಿಕೆ ದಿನಾಂಕ ಎಪ್ರಿಲ್ 19 ಆಗಿದೆ.
ವಿದ್ಯಾರ್ಥಿಗಳು ಇಂದಿನಿಂದ ಎಪ್ರಿಲ್ 17ರ ನಡುವೆ ತಮ್ಮ ಕಾಲೇಜುಗಳಲ್ಲಿ ಪೂರಕ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. 2023 ರ ಅಥವಾ ನಂತರದ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದವರು ತಮ್ಮ ಫಲಿತಾಂಶ ಆಧಾರದ ಮೇಲೆ ನೋಂದಾಯಿಸಿಕೊಳ್ಳಬಹುದು, 2022 ರಲ್ಲಿ ಅಥವಾ ಅದಕ್ಕಿಂತ ಮೊದಲು ಅನುತ್ತೀರ್ಣರಾದವರು ನೋಂದಣಿಗಾಗಿ ಕೆ ಎಸ್ ಇ ಎ ಬಿ ಒದಗಿಸಿದ ‘ಎಂಸಿಎ’ ಅಗತ್ಯವಿರುತ್ತದೆ.
0 comments:
Post a Comment