ಬಂಟ್ವಾಳ, ಎಪ್ರಿಲ್ 10, 2025 (ಕರಾವಳಿ ಟೈಮ್ಸ್) : ತಾಲೂಕಿನ ನರಿಕೊಂಬು ಗ್ರಾಮದ ತಾಯಿ- ಮಗಳು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ಜೊತೆಯಾಗಿ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅಚ್ಚರಿಯ ಘಟನೆಗೆ ಕಾರಣರಾಗಿದ್ದಾರೆ.
ನರಿಕೊಂಬು ಗ್ರಾಮದ ಮಾಣಿಮಜಲು ನಿವಾಸಿ ರವಿಕಲಾ ಹಾಗೂ ಆಕೆಯ ಪುತ್ರಿ ತ್ರಿಶಾ ಎಂಬವರು ಜೊತೆಯಾಗಿ ಪಿಯುಸಿ ಪಾಸ್ ಮಾಡಿದ ತಾಯಿ-ಮಗಳು. ರವಿಕಲಾ ಅವರು ಈ ಬಾರಿ ಪ್ರಥಮ ಬಾರಿಗೆ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದಿದ್ದು, 275 ಅಂಕಗಳನ್ನು ಗಳಿಸುವ ಮೂಲಕ ಮೊದಲ ಪ್ರಯತ್ನದಲ್ಲೇ ಮೇಲುಗೈ ಸಾಧಿಸಿದ್ದಾರೆ. ಖಾಸಗಿ ಪರೀಕ್ಷೆ ಕಟ್ಟಿದ್ದರಿಂದ ಇವರಿಗೆ ಆಂತರಿಕ ಮೌಲ್ಯಮಾಪನ ಅಂಕಗಳು ಲಭ್ಯವಾಗದೆ ಇದ್ದು, 480 ಅಂಕಗಳಲ್ಲಿ ಪರೀಕ್ಷೆ ಬರೆದು 275 ಅಂಕ ಪಡೆದುಕೊಂಡಿದ್ದಾರೆ. ಪುತ್ರಿ ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿದ್ದು, 586 ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್ ತೇರ್ಗಡೆ ಹೊಂದಿದ್ದಾರೆ.
ರವಿಕಲಾ ಅವರು 1998 ರಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ್ದು, 403 ಅಂಕಗಳನ್ನು ಪಡೆದುಕೊಂಡು ಪಾಸ್ ಆಗಿದ್ದರು. ಕಳೆದ ಹಲವು ವರ್ಷಗಳಿಂದ ಅವರು ತಾರಿಪಡ್ಪು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರಕಾರದ ಮುಂದಿನ ಯೋಜನೆಯಂತೆ ಮುಂದಿನ ದಿನಗಳಲ್ಲಿ ಅಂಗನವಾಡಿ ಕೇಂದ್ರಗಳು ಮೇಲ್ದರ್ಜೆಗೇರಲಿದ್ದು, ಇಲ್ಲಿಯೇ ಮಕ್ಕಳಿಗೆ ಎಲ್ ಕೆ ಜಿ, ಯು ಕೆ ಜಿ ಶಿಕ್ಷಣ ದೊರೆಯಲಿದೆ ಎನ್ನಲಾಗಿದೆ. ಹೊಸ ನಿಯಮ ಜಾರಿಯಾದ ನಂತರ ಅಂಗನವಾಡಿ ಕಾರ್ಯಕರ್ತೆಯರು ಪಿಯುಸಿ ಉತ್ತೀರ್ಣರಾಗಿರಬೇಕು. ಈ ಕಾರಣದಿಂದ ತನ್ನ ಕೆಲಸಕ್ಕೆ ಮುಂದೆ ಅನಾನುಕೂಲತೆ ಉಂಟಾಗಬಾರದು ಎಂಬ ಉದ್ದೇಶದಿಂದ ರವಿಕಲಾ ಅವರು ಸುಮಾರು 27 ವರ್ಷಗಳ ಬಳಿಕ ಪಿಯುಸಿ ಪರೀಕ್ಷೆ ಕಟ್ಟಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ಸು ದೊರೆತಿದ್ದು, ಪಾಸ್ ಆದ ಖುಷಿಯಲ್ಲಿದ್ದಾರೆ.
ಪತಿ, ಮಕ್ಕಳು, ಕುಟುಂಬಿಕರು ಹಾಗೂ ಇಲಾಖಾಧಿಕಾರಿಗಳು, ಸಿಬ್ಬಂದಿಗಳ ಸಹಕಾರದಿಂದ ಪರೀಕ್ಷಾ ತಯಾರಿ ಸುಸೂತ್ರವಾಗಿ ನಡೆದಿದೆ ಎನ್ನುತ್ತಾರೆ ರವಿಕಲಾ.
0 comments:
Post a Comment