ಮಂಗಳೂರು, ಎಪ್ರಿಲ್ 19, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲೆ ಕೋಮು ಧ್ರುವೀಕರಣದ ಮೂಲಕ ಕುಖ್ಯಾತಿ ಪಡೆಯುತ್ತಿರುವ, ಅದರಲ್ಲೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಹೋದರ ಧರ್ಮೀಯರ ವ್ಯಾಪಾರದ ಹಕ್ಕಿನ ಮೇಲೂ ವಕ್ರ ದೃಷ್ಟಿ ಬೀರುತ್ತಿರುವ ವಿಷಮ ಸನ್ನಿವೇಶದ ಮಧ್ಯೆ ಶುಕ್ರವಾರ ಅಡ್ಯಾರ್-ಕಣ್ಣೂರಿನ ಷಾ ಗಾರ್ಡನ್ ಮೈದಾನದಲ್ಲಿ ನಡೆದ ಮುಸ್ಲಿಂ ಸಮುದಾಯದ ಧಾರ್ಮಿಕ ನಾಯಕರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಸಹೋದರ ಧರ್ಮಕ್ಕೆ ಸೇರಿದ ಮಹಿಳೆಯರು ತಮ್ಮ ಹೊಟ್ಟೆಪಾಡಿಗಾಗಿ ಚರುಂಬುರಿ ವ್ಯಾಪಾರವನ್ನು ಯಾವುದೇ ಅಳುಕಿಲ್ಲದೆ, ನಗುಮುಖದಿಂದ ಸರಾಗವಾಗಿ ನಡೆಸುತ್ತಿದ್ದ ದೃಶ್ಯ ಎಲ್ಲರ ಗಮನ ಸೆಳೆಯಿತು.
ಒಂದೇ ಧರ್ಮದ ಜನ ಮಾತ್ರ ಜಮಾಯಿಸುವ ಇಂತಹ ಪ್ರತಿಭಟನಾ ಸಮಾವೇಶದ ಜಾಗದಲ್ಲಿ ರಸ್ತೆ ಬದಿ ಈ ಮಹಿಳೆಯರು ತಮ್ಮ ವ್ಯಾಪಾರ ಸಾಮಗ್ರಿಗಳೊಂದಿಗೆ ಟೇಬಲ್ ಇಟ್ಟು ಯಾವುದೇ ಅಳುಕಿಲ್ಲದೆ ತಮ್ಮ ಹೊಟ್ಟೆಪಾಡಿನ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಯರೊಬ್ಬರೂ ಇವರ ವ್ಯಾಪಾರದ ಬಗ್ಗೆ ವಕ್ರ ದೃಷ್ಟಿ ಬೀರುವುದಾಗಲೀ, ಅವರ ಧರ್ಮದ ಬಗ್ಗೆ ಜಾತಿಯ ಬಗ್ಗೆ ಪ್ರಶ್ನಿಸುವುದಾಗಲೀ, ವ್ಯಾಪಾರ ಮಾಡದೆ ಬಹಿಷ್ಕರಿಸಿರುವುದಾಗಲೀ ನಡೆದಿಲ್ಲ. ಪ್ರತಿಭಟನೆಗೆ ಬಂದ ಬಹುತೇಕ ಮುಸಲ್ಮಾನರು ಯಾವುದೇ ಬೇಧ ಭಾವ ಮಾಡದೆ ನೇರವಾಗಿ ಈ ಸಹೋದರ ಧರ್ಮೀಯ ಮಹಿಳೆಯರ ಬಳಿ ತೆರಳಿ ಖರೀದಿಸಿ ಹಣ ಕೊಟ್ಟು ತೆರಳುತ್ತಿದ್ದ ದೃಶ್ಯ ಕಂಡು ಬಂತು. ಕೇವಲ ಬೆರಳೆಣಿಕೆಯ ಮಂದಿಗಳ ಕೋಮು ವೈಷಮ್ಯದ ಮಧ್ಯೆಯೂ ಬಹುಸಂಖ್ಯಾತ ಮಂದಿ ಇನ್ನೂ ಸೌಹಾರ್ದ ಬಯಸಿ ಮಣ್ಣಿನ ಸ್ನೇಹ-ಸೌಹಾರ್ದದ ಕಂಪನ್ನು ಉಳಿಸಿ ಬೆಳೆಸುವ ಮನಸ್ಥಿತಿ ಉಳ್ಳವರು ಎಂಬುದು ಕಾಲಕಾಲಕ್ಕೂ ಸಾಬೀತಾಗುತ್ತಲೇ ಇದೆ.
0 comments:
Post a Comment