ಬಂಟ್ವಾಳ, ಎಪ್ರಿಲ್ 17, 2025 (ಕರಾವಳಿ ಟೈಮ್ಸ್) : ಸಿಗರೇಟ್ ಸಾಲ ಕೇಳಿದ ಸಂದರ್ಭ ಕೊಡದ ಸಿಟ್ಟಿನಲ್ಲಿ ಅಂಗಡಿ ಮಾಲಕಗೆ ಕಾರಿನಲ್ಲಿ ಬಂದ ತಂಡವೊಂದು ತಲವಾರು ಹಲ್ಲೆ ನಡೆಸಿದ ಘಟನೆ ನರಿಕೊಂಬು ಗ್ರಾಮದ ಸಾಗರ್ ಹಾಲ್ ಬಳಿ ಮಂಗಳವಾರ ಮಧ್ಯರಾತ್ರಿ ವೇಳೆ ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಹಲ್ಲೆಗೊಳಗಾದ ಅಂಗಡಿ ಮಾಲಿಕ ನರಿಕೊಂಬು ಗ್ರಾಮದ ನೆಹರುನಗರ ನಿವಾಸಿ ದಿವಂಗತ ಹುಸೈನ್ ಎಂಬವರ ಪುತ್ರ ತಸ್ಲೀಮ್ ಆರೀಫ್ (41) ಅವರು ಪೊಲೀಸರಿಗೆ ದೂರು ನೀಡಿದ್ದು, ಇವರು ನೆಹರುನಗರ ಎಂಬಲ್ಲಿರುವ ಹೈವೇ ಹೋಟೇಲ್ ಬಳಿ ಫಯಾಜ್ ಎಂಬವರೊಂದಿಗೆ ಜೊತೆಯಾಗಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು, ಮಂಗಳವಾರ ರಾತ್ರಿ ಸುಮಾರು 11.50 ಗಂಟೆಗೆ ಅಂಗಡಿಯಲ್ಲಿರುವಾಗ ಪರಿಚಯದ ಹ್ಯಾರೀಸ್ ಎಂಬವರು ಫರ್ವಿಝ್ ಎಂಬವರೊಂದಿಗೆ ಹುಂಡೇ ಕಂಪೆನಿಯ ವೆನ್ಯೂ ಕಾರಿನಲ್ಲಿ ಅಂಗಡಿಗೆ ಬಂದು 6 ಪ್ಯಾಕೇಟ್ ಸಿಗರೇಟ್ ಸಾಲವಾಗಿ ಕೇಳಿದ್ದಾರೆ. ಈ ಸಂದರ್ಭ ತಸ್ಲೀಂ ಸಾಲ ಕೊಡುವುದಿಲ್ಲ ಎಂದು ತಿಳಿಸಿದ್ದು, ಈ ಸಂದರ್ಭ ಹ್ಯಾರೀಸ್ ‘ಯಾಕೆ ಸಾಲ ಕೊಡುವುದಿಲ್ಲ? ಅಂಗಡಿಯನ್ನು ಬಂದ್ ಮಾಡಿಸುತ್ತೇನೆ ಎಂದು ಬೆದರಿಕೆ ಹಾಕಿ ಬಳಿಕ ಹ್ಯಾರೀಸ್ 1 ಸಾವಿರ ರೂಪಾಯಿ ಹಣ ಕೊಟ್ಟು 6 ಪ್ಯಾಕೆಟ್ ಸಿಗರೇಟ್ ಖರೀದಿಸಿ ಅಲ್ಲಿಂದ ತೆರಳಿದ್ದಾನೆ.
ಬಳಿಕ ತಸ್ಲೀಂ ಎಂದಿನಂತೆ ಅಂಗಡಿ ಬಂದ್ ಮಾಡಿ ಮನೆಗೆ ಹೋಗಿ ಮಲಗಿದ್ದವರು ಬೆಳಗ್ಗಿನ ಜಾವ ಸುಮಾರು 2.45ರ ವೇಳೆಗೆ ಎಚ್ಚರಗೊಂಡು ಅಂಗಡಿಯಲ್ಲಿಟ್ಟಿದ್ದ ನಗದನ್ನು ಮನೆಗೆ ತರಲು ವಾಪಾಸು ಅಂಗಡಿಗೆ ಹೋಗಿ ಅಂಗಡಿಯಲ್ಲಿಟ್ಟಿದ್ದ ನಗದನ್ನು ಪಡೆದು ಮನೆಗೆ ಹೊರಡುತ್ತಿರುವ ವೇಳೆ ಬೆಳಗ್ಗಿನ ಜಾವ ಸುಮಾರು 3 ಗಂಟೆಗೆ ಸಾಗರ್ ಅಡಿಟೋರಿಯಂ ಹಾಲ್ ಬಳಿ ನಿಂತಿದ್ದ ಹುಂಡೈ ವೆನ್ಯೂ ಕಾರಿನಿಂದ ಹ್ಯಾರಿಸ್ ಮತ್ತು ಇನ್ನೋರ್ವ ವ್ಯಕ್ತಿ ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಬಂದು ಕೈಗಳನ್ನು ಹಿಂಬದಿ ಇಟ್ಟುಕೊಂಡು ಏಕಾಏಕಿ ಹ್ಯಾರೀಸ್ ಎಂಬಾತ ತಸ್ಲೀಂನನ್ನುದ್ದೇಶಿಸಿ ನಿನಗೆ ಬಾರಿ ಅಹಂಕಾರ ಇದೆಯಾ ಎಂದು ಹೇಳಿ ಆತನ ಕೈಯಲ್ಲಿದ್ದ ತಲವಾರಿನಿಂದ ತಸ್ಲೀಮನ ತಲೆಗೆ ಬೀಸಿ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಇವತ್ತೇ ನಿನ್ನ ಕಥೆ ಮುಗಿಸುತ್ತೇನೆ ಎಂದು ಬೆದರಿಸಿದಾಗ, ತಸ್ಲೀಂ ತನ್ನ ಎಡ ಕೈಯನ್ನು ಅಡ್ಡ ಹಿಡಿದಿದ್ದು, ತಲವಾರು ಏಟು ಕೋಲು ಕೈಗೆ ಮತ್ತು ಎಡಕೈಯ ರಟ್ಟೆಗೆ ತಾಗಿ ಗಾಯವಾಗಿರುತ್ತದೆ. ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿಯು ಆತನ ಕೈಯಲ್ಲಿದ್ದ ತಲವಾರಿನಿಂದ ತಸ್ಲೀಮನ ಹೊಟ್ಟೆಗೆ ಬೀಸಿದ್ದು, ಈ ಸಂದರ್ಭ ಹೊಟ್ಟೆಗೂ ತಲವಾರು ತಾಗಿ ಗಾಯವಾಗಿದೆ. ಇದೇ ವೇಳೆ ಇನ್ನೋರ್ವ ವ್ಯಕ್ತಿ ತಸ್ಲೀಂ ಓಡಿ ಹೋಗದಂತೆ ತಡೆದಿದ್ದಾನೆ. ಅಷ್ಟೊತ್ತಿಗೆ ಬಿ ಸಿ ರೋಡು ಕಡೆಯಿಂದ ಹಮೀದ್ ಎಂಬವರು ಸ್ಕೂಟರಿನಲ್ಲಿ ಬರುತ್ತಿರುವುದನ್ನು ನೋಡಿದ ಹ್ಯಾರೀಸ್ ಮತ್ತು ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಹಮೀದ್ ಅವರು ತಸ್ಲೀಮನನ್ನು ಸ್ಕೂಟರಿನಲ್ಲಿ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿದ್ದಾಗ ಸಮದ್ ಎಂಬವರು ಅಂಬುಲೆನ್ಸ್ ವಾಹನದಲ್ಲಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2025 ಕಲಂ 351(2), 118(1), 109 ಜೊತೆಗೆ 3(5) ಬಿ ಎನ್ ಎಸ್ 2023ರಂತೆ ಪ್ರಕರಣ ದಾಖಲಾಗಿದೆ.
0 comments:
Post a Comment