![]() |
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರು ಮುದ್ರಿಸಿ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟರ್ ಗಳು |
ಮಂಗಳೂರು, ಎಪ್ರಿಲ್ 10, 2025 (ಕರಾವಳಿ ಟೈಮ್ಸ್) : ಇನ್ನೇನು ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಹೊರಬೀಳುವ ಹಂತದಲ್ಲಿ ಜಿಲ್ಲೆಯ ವಿವಿಧೆಡೆ ಪ್ರತಿಷ್ಠಿತ ಕಾಲೇಜುಗಳ ಹೆಸರಲ್ಲಿ ಸೀಟ್ ಮಾಡಿಕೊಡುವ ಹೆಸರಿನಲ್ಲಿ ಕೆಲವೊಂದು ಖಾಸಗಿ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ದೋಚಲು ರೆಡಿಯಾಗಿದ್ದು, ಎಚ್ಚರ ವಹಿಸುವಂತೆ ವಿದ್ಯಾಭಿಮಾನಿಗಳು ಆಗ್ರಹಿಸಿದ್ದಾರೆ.
ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಪಾಲಿಗೆ ಮುಕ್ತವಾಗಿದ್ದರೂ ಕೆಲವೊಂದು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಹೆಸರುಗಳನ್ನು ಪೋಸ್ಟರ್ ಗಳಲ್ಲಿ ಮುದ್ರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯವಾಗುವ ಮೂಲಕ ವಿದ್ಯಾರ್ಥಿಗಳು ಹಾಗೂ ಪೋಷಕರುಗಳನ್ನು ಬಲೆಗೆ ಬೀಳಿಸಿ ಸೀಟ್ ಮಾಫಿಯಾ ನಡೆಸಲಾಗುತ್ತಿದೆ ಎಂದು ಆರೋಪಿಸಲಾಗುತ್ತಿದ್ದು, ಈ ಬಗ್ಗೆ ಜನ ಎಚ್ಚರ ವಹಿಸುವಂತೆ ಶಿಕ್ಷಣ ಪ್ರೇಮಿಗಳು ಪ್ರತೀ ವರ್ಷವೂ ಎಚ್ಚರಿಸುತ್ತಲೇ ಬರುತ್ತಿದ್ದಾರೆ.
ಆದರೆ ಇಂತಹ ಜಾಲಗಳು ಪ್ರತೀ ವರ್ಷವೂ ಸಕ್ರಿಯಾಗಿದ್ದುಕೊಂಡು ವಿದ್ಯಾರ್ಥಿಗಳಿಂದ ಸಾವಿರಾರು-ಲಕ್ಷಾಂತರ ಮೊತ್ತದ ಹಣ ಪೀಕಿಸಿ ನಿಗದಿತ ಶಿಕ್ಷಣ ಸಂಸ್ಥೆಗಳಲ್ಲಿ ಅಡ್ಮಿಶನ್ ಪಡೆದುಕೊಳ್ಳಲು ಮಧ್ಯಸ್ಥಿಕೆ ವಹಿಸಿ ದೊಡ್ಡ ಮಟ್ಟದ ಕಮಿಷನ್ ಹೊಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕೆಲವು ವೈಟ್ ಕಾಲರ್ ವ್ಯಕ್ತಿಗಳು ಇಂತಹ ದಂಧೆ ನಡೆಸುತ್ತಿದ್ದು, ಇದಕ್ಕೆ ತಮ್ಮ ರಾಜಕೀಯ ಗಾಡ್ ಫಾದರ್ ಗಳ ಕೃಪಾಕಟಾಕ್ಷತೆಯನ್ನೂ ಬಳಸಿಕೊಂಡು ಸಮಾಜದಲ್ಲಿ ಬಡವರನ್ನು ಯಾಮಾರಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಶಿಕ್ಷಣ ಕಾಶಿ ಎಂದೇ ಹೆಸರು ಪಡೆದುಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿದ್ದು, ಸಮಾಜದ ಎಲ್ಲ ವರ್ಗದ ಜನರಿಗೂ ಗುಣ ಮಟ್ಟದ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದೆ. ಈ ಮಧ್ಯೆ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೂ ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಕ್ತ ಅವಕಾಶವನ್ನು ನೀಡುತ್ತಿದ್ದರೂ ಕೆಲ ದಲ್ಲಾಳಿ ದಗಲ್ಬಾಜಿಗಳು ವಿವಿಧ ಮೋಸದ ಆಮಿಷಗಳು, ಸೋಶಿಯಲ್ ನೆಟ್ ವರ್ಕ್ ಪೋಸ್ಟರ್ ಗಳ ಮೂಲಕ ತಮ್ಮತ್ತ ಸೆಳೆದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಮಾಫಿಯಾವಾಗಿ ಮಾರ್ಪಡಿಸಿ ಯಾವುದೇ ಬಂಡವಾಳವಿಲ್ಲದೆ ತಮ್ಮ ಜೀವನ ಮಾರ್ಗವನ್ನು ಅದರಲ್ಲೇ ಕಂಡುಕೊಳ್ಳುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿದೆ.
ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳು ಇಂತಹ ಮಾಫಿಯಾಗಳಿಂದ, ಏಜೆಂಟರುಗಳಿಂದ ಜಾಗರೂಕರಾಗಿ ಶಿಕ್ಷಣವನ್ನು ವ್ಯಾಪಾರದ ಸರಕಾಗಿಸುವ ಅಥವಾ ಮಾಫಿಯಾ ಆಗಿಸುತ್ತಿರುವ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು. ಆ ಮೂಲಕ ವಿದ್ಯಾರ್ಥಿ ಸ್ನೇಹಿ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ ಹಾಗೂ ಇಂತಹ ವ್ಯಕ್ತಿಗಳ ಬಗ್ಗೆ ಸಂಬಂಧಪಟ್ಟ ಶಿಕ್ಷಣ ಇಲಾಖಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನಿಗಾ ವಹಿಸುವಂತೆಯೂ ಸಮಾಜದ ಶಿಕ್ಷಣ ಪ್ರೇಮಿಗಳು ಆಗ್ರಹಿಸಿದ್ದಾರೆ.
0 comments:
Post a Comment