ಸೋನಿಯಾ-ರಾಹುಲ್ ವಿರುದ್ದ ಇಡಿ ಚಾರ್ಜ್ ಶೀಟ್ ಸಲ್ಲಿಕೆ ವಿರುದ್ದ ಮಂಗಳೂರಿನಲ್ಲಿ ಕೈ ಪಾಳಯ ಪ್ರತಿಭಟನೆ
ಮಂಗಳೂರು, ಎಪ್ರಿಲ್ 16, 2025 (ಕರಾವಳಿ ಟೈಮ್ಸ್) : ಕೇಂದ್ರದ ಬಿಜೆಪಿ ಸರಕಾರ ಜಾರಿ ನಿರ್ದೇಶನಾಲಯದ ಮೂಲಕ ದಬ್ಬಾಳಿಕೆ ನಡೆಸಲು ಹೊರಟಿದೆ, ಅದಕ್ಕೆ ಕಾಂಗ್ರೆಸ್ ದೇಶವ್ಯಾಪಿ ಹೋರಾಟ ಮಾಡುವ ಮೂಲಕ ತಕ್ಕ ಉತ್ತರ ಕೊಟ್ಟಿದೆ. ಈ ಹಿಂದೆಯೂ ಇಡಿ ಮೂಲಕ ದಾಳಿ ಮಾಡಿಸಿ ಬಿಜೆಪಿಯೇತರ ನಾಯಕರನ್ನು ಹೆದರಿಸುವ ಕೆಲಸ ಮಾಡಿತ್ತು. ಯಾರು ಇಡಿ ಮೇಲೆ ಭಯಪಟ್ಟು ಬಿಜೆಪಿ ಸೇರಿದ್ದಾರೋ ಅವರ ಮೇಲಿನ ಎಲ್ಲ ಕೇಸ್‍ಗಳನ್ನು ಮುಚ್ಚಿ ಹಾಕಲಾಗಿದೆ. ಇಡಿ ದಾಳಿಯ ಭೀತಿಯಿಂದ ಬಿಜೆಪಿ ಸೇರಿದವರು ವಾಷಿಂಗ್ ಮಿಷಿನ್‍ಗೆ ಹಾಕಿದಂತೆ ಸ್ವಚ್ಛ ಆಗುತ್ತಾರೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ ರಮಾನಾಥ ರೈ ಲೇವಡಿ ಮಾಡಿದರು.
ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತಿತರ ನಾಯಕರ ವಿರುದ್ಧ ಇಡಿ ಸುಳ್ಳು ಆರೋಪ ಹೊರಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ ಘಟನೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಬುಧವಾರ ಮಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರಕಾರ ಇಡಿ ಮುಂದಿಟ್ಟು ರಾಜಕೀಯ ನಡೆಸುತ್ತಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಮೇಲೆ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿರುವುದು ಸಂಪೂರ್ಣ ರಾಜಕೀಯ ಪ್ರೇರಿತ. ಇದರ ವಿರುದ್ಧ ನಾವು ಬೀದಿಗಿಳಿದು ಹೋರಾಟ ನಡೆಸಲಿದ್ದೇವೆ. ಅಗತ್ಯ ಬಿದ್ದರೆ ಪ್ರಾಣ ಕೊಡಲೂ ಸಿದ್ಧ ಎಂದವರು ಗುಡುಗಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಸುಳ್ಳು ದೋಷಾರೋಪ ಪಟ್ಟಿ ಸಲ್ಲಿಸಿರುವುದು ಖಂಡನೀಯ. ಇದರ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದರು.
ನಗರದ ಯೆಯ್ಯಾಡಿಯಲ್ಲಿರುವ ಇಡಿ ಕಚೇರಿ ಎದುರು ಜಮಾಯಿಸಿದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಬಿಜೆಪಿ ಸರ್ಕಾರ, ಅಮಿತ್ ಶಾ, ಇಡಿ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಬಳಿಕ ಗೃಹ ಸಚಿವ ಅಮಿತ್ ಶಾ ಭಾವಚಿತ್ರವನ್ನು ಸುಟ್ಟು ಪ್ರತಿಭಟಿಸಿದರು. ಬಳಿಕ ಇದೇ ವೇಳೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮಂಗಳೂರಿನ ಜಾರಿ ನಿರ್ದೇಶನಾಲಯ (ಇಡಿ) ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ಪಕ್ಷ ಮುಖಂಡರಾದ ಭರತ್ ಮುಂಡೋಡಿ, ಶಶಿಧರ್ ಹೆಗ್ಡೆ, ಟಿ ಹೊನ್ನಯ್ಯ, ಜೆ ಅಬ್ದುಲ್ ಸಲೀಂ, ಪ್ರಕಾಶ್ ಸಾಲಿಯಾನ್, ಪದ್ಮನಾಭ ಪೂಜಾರಿ ವಿಟ್ಲ, ಮನೋಹರ್ ರಾಜೀವ್, ನಾರಾಯಣ್ ನಾಯಕ್, ಲಾರೆನ್ಸ್ ಡಿ ಸೋಜಾ, ಅಲಿಸ್ಟರ್ ಡಿ ಕುನ್ನಾ, ಪ್ರದೀಪ್ ರೈ ಪಾಂಬರ್ ಪುತ್ತೂರು, ಉಷಾ ಅಂಚನ್ ಕಡಬ, ವಿಜಯ ಕುಮಾರ್ ಸೊರಕೆ, ಕಿರಣ್ ಬುಡ್ಲೆಗುತ್ತು ಸುಳ್ಯ, ಶುಭೋದಯ ಆಳ್ವ, ಟಿ ಕೆ ಸುಧೀರ್, ಎಂ ಪಿ ಮನುರಾಜ್, ನೀರಜ್‍ಪಾಲ್, ನಝೀರ್ ಬಜಾಲ್, ಪಿ ಎಸ್ ಗಂಗಾಧರ್ ಸುಳ್ಯ, ಗೀತಾ ಅತ್ತಾವರ, ಮಹೇಶ್ ರೈ ಕಾವು ಪುತ್ತೂರು, ಸುರೇಶ್ ನಾವೂರ್, ಸದಾನಂದ ಮಾವಜಿ ಸುಳ್ಯ, ಪದ್ಮನಾಭ ಸಾಲಿಯಾನ್, ಚೇತನ್ ಕುಮಾರ್ ಅಶೋಕ್ ನಗರ, ರಾಹುಲ್ ಅದಪಾಂಗಯ ಸುಳ್ಯ, ಸೋಹಾನ್ ಎಸ್ ಕೆ, ಸಬೀರ್ ಎಸ್, ಶಕುಂತಲಾ ಕಾಮತ್, ಅನಸ್ ವಿಟ್ಲ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
0 comments:
Post a Comment