ಬಂಟ್ವಾಳ, ಎಪ್ರಿಲ್ 04, 2025 (ಕರಾವಳಿ ಟೈಮ್ಸ್) : ಯಾವುದೇ ಮುನ್ಸೂಚನೆ ನೀಡದೆ ಅಟೋ ರಿಕ್ಷಾವನ್ನು ತಿರುಗಿಸಿದ ಬಗ್ಗೆ ಚಾಲಕನಲ್ಲಿ ಪ್ರಶ್ನಿಸಿದ ದ್ವಿಚಕ್ರ ವಾಹನದ ಸಹಸವಾರಗೆ ಅಟೋ ಚಾಲಕ ಹಲ್ಲೆ ನಡೆಸಿದ ಘಟನೆ ಪಾಣೆಮಂಗಳೂರು ಪೇಟೆಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಗಾಯಾಳು ಸ್ಕೂಟರ್ ಸಹಸವಾರನನ್ನು ನರಿಕೊಂಬು ಗ್ರಾಮದ ನಾಯಿಲ ನಿವಾಸಿ ದಯಾನಂದ (47) ಎಂದು ಹೆಸರಿಸಲಾಗಿದೆ. ಇವರು ಗುರುವಾರ ಅಸೌಖ್ಯದ ಕಾರಣ ಕೆಲಸಕ್ಕೆ ರಜೆ ಮಾಡಿ, ನೆರೆ ಮನೆಯ ಸುನಿಲ್ ಮರ್ದೋಳಿ ಎಂಬವರ ಜೊತೆ ಆಕ್ಟಿವಾ ವಾಹನದಲ್ಲಿ ಪಣೋಲಿಬೈಲು ದೇವಸ್ಥಾನಕ್ಕೆ ಹೋಗಿ ಪ್ರಸಾದ ಸ್ವೀಕರಿಸಿ ವಾಪಾಸು ಮನೆ ಕಡೆ ಬರುತ್ತಿರುವಾಗ ಪಾಣೆಮಂಗಳೂರು ಜನತಾ ಹೋಟೆಲ್ ಬಳಿ ರಸ್ತೆಯ ಎಡ ಬದಿ ನಿಲ್ಲಿಸಿದ್ದ ಕೆ ಎ 70 7676 ನೋಂದಣಿ ಸಂಖ್ಯೆಯ ಅಟೋ ರಿಕ್ಷಾವನ್ನು ಅದರ ಚಾಲಕ ಯಾವುದೇ ಸೂಚನೆ ನೀಡದೆ ಏಕಾಏಕಿ ಬಲ ಬದಿಗೆ ತಿರುಗಿಸಿದ್ದಾನೆ. ಆದರೆ ಸ್ಕೂಟರ್ ಸವಾರ ಡಿಕ್ಕಿ ಹೊಡೆಯುವುದನ್ನು ಹೇಗೋ ತಪ್ಪಿಸಿಕೊಂಡಿದ್ದಾರೆ. ಈ ಬಗ್ಗೆ ಸ್ಕೂಟರ್ ಸಹಸವಾರ ದಯಾನಂದ ಅವರು ಅಟೋ ಚಾಲಕನಲ್ಲಿ ಸೂಚನೆ ನೀಡದೆ ತಿರುಗಿಸಿದ ಬಗ್ಗೆ ಪ್ರಶ್ನಿಸಿದ್ದು, ಈ ಸಂದರ್ಭ ಅಟೋ ಚಾಲಕ ರಿಕ್ಷಾವನ್ನು ಆಕ್ಟಿವಾಗೆ ಅಡ್ಡವಾಗಿ ನಿಲ್ಲಿಸಿ ಕೇಳಲು ನೀನು ಯಾರು ಎಂದು ಹೇಳಿ ಅಟೋದಿಂದ ಇಳಿದು ಬಂದು ದಯಾನಂದ ಅವರಿಗೆ ಅವಾಚ್ಯವಾಗಿ ಬೈದುದಲ್ಲದೆ ಕೈಯಲ್ಲಿದ್ದ ಪಂಚ್ ನಿಂದ ಹಾಗೂ ಕೈ ಮುಷ್ಠಿಯಿಂದ ತಲೆ, ಕೆನ್ನೆ ಹಾಗೂ ತುಟಿಗೆ ಹಲ್ಲೆ ನಡೆಸಿದ್ದಾನೆ. ಅಟೋ ಚಾಲಕನ ಹಲ್ಲೆಯಿಂದ ದಯಾನಂದ ಅವರಿಗೆ ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment