ಬಂಟ್ವಾಳ, ಎಪ್ರಿಲ್ 08, 2025 (ಕರಾವಳಿ ಟೈಮ್ಸ್) : ತಾವು ಕೆಲಸ ಮಾಡುತ್ತಿದ್ದ ತೋಟದ ಕುಮ್ಕಿ ಜಾಗದಲ್ಲಿ ಶೆಡ್ ಹಾಕಿ ವಾಸವಾಗಿದ್ದ ದಂಪತಿಯ ಶೆಡನ್ನು ಪರಿಚಯ ನಾಲ್ಕೈದು ಮಂದಿ ಅಕ್ರಮ ಪ್ರವೇಶ ಮಾಡಿ ಕೆಡವಿ ಹಾಕಿದ್ದಲ್ಲದೆ ಬೆದರಿಕೆ ಹಾಕಿದ ಘಟನೆ ಅಲ್ಲಿಪಾದೆ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ್ದು, ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೇವಸ್ಯಪಡೂರು ಗ್ರಾಮದ ಅಲ್ಲಿಪಾದೆ ನಿವಾಸಿ ಲೋಕೇಶ್ ನಾಯ್ಕ ಎಂಬವರು ಸ್ಥಳೀಯ ನಿವಾಸಿ ಲವೀನ ಅರ್ಹಾನ ಎಂಬವರ ರಬ್ಬರ್ ತೋಟವನ್ನು ಸುಮಾರು 14 ವರ್ಷಗಳಿಂದ ನೋಡಿಕೊಂಡು ಅಲ್ಲೇ ವಾಸ್ತವ್ಯ ಇದ್ದವರು ಸುಮಾರು 6 ತಿಂಗಳ ಹಿಂದೆ ಲವೀನ ಅರ್ಹಾನ ಅವರ ವರ್ಗ ಜಾಗದ ಕುಮ್ಕಿ ಜಾಗದಲ್ಲಿ ಶೆಡ್ ಕಟ್ಟಿಕೊಂಡು ಸಂಸಾರ ಸಮೇತ ವಾಸವಾಗಿರುತ್ತಾರೆ.
ಹೀಗಿರುತ್ತಾ ಭಾನುವಾರ ಲೋಕೇಶ್ ಅವರು ಬಂಟ್ವಾಳಕ್ಕೆ ಹೋಗಿದ್ದ ವೇಳೆ ಮನೆಯಲ್ಲಿ ಪತ್ನಿ ಒಬ್ಬಳೇ ಇದ್ದಾಗ ಬೆಳಿಗ್ಗೆ ಸುಮಾರು 9.30 ರ ವೇಳೆಗೆ ಪರಿಚಯದ ಕೃಷ್ಣಪ್ಪ, ತಿಮ್ಮಪ್ಪ, ಶ್ರೀಧರ, ರಂಜಿತ್ ಹಾಗೂ ಇತರರು ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಲೋಕೇಶ್ ದಂಪತಿ ವಾಸವಾಗಿದ್ದ ಶೆಡ್ ಕೆಡವಿ ಹಾಕಿ, ನೀವು ಇಲ್ಲಿ ವಾಸ ಮಾಡಿದರೆ ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿರುತ್ತಾರೆ ಎಂದು ದೂರಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment