ಮಂಗಳೂರು, ಎಪ್ರಿಲ್ 06, 2025 (ಕರಾವಳಿ ಟೈಮ್ಸ್) : ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಕಳೆದ ಒಂದು ವರ್ಷದಿಂದ ಪರಿಚಯಸ್ಥ ಅಟೋ ಚಾಲಕನೋರ್ವ ಸರಣಿ ಅತ್ಯಾಚಾರಗೈದು ಗರ್ಭಿಣಿಯಾಗಿಸಿದ ಬಗ್ಗೆ ದ ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತ್ಯಾಚಾರ ಆರೋಪಿಯನ್ನು ಅಟೋ ಚಾಲಕ ಮಂಜುನಾಥ್ ಕಟ್ಟತ್ತಡ್ಕ ಎಂದು ಹೆಸರಿಸಲಾಗಿದೆ.
ಅಪ್ರಾಪ್ತ ಪ್ರಾಯದ ಸಂತ್ರಸ್ತೆ ಬಾಲಕಿಯು ಕಾಲೇಜು ವಿದ್ಯಾರ್ಥಿನಿಯಾಗಿದ್ದು, 2024 ರ ಆಗಸ್ಟ್ ತಿಂಗಳಿನಲ್ಲಿ ಕಾಲೇಜಿಗೆ ರಜೆಯಿದ್ದುದರಿಂದ ಮನೆಯಲ್ಲಿ ಒಬ್ಬಳೇ ಇದ್ದಾಗ, ಬಾಲಕಿಯ ಪರಿಚಯದ ಆರೋಪಿ ಬಾಲಕಿಯ ಮನೆಗೆ ನೀರು ಕೇಳುವ ನೆಪದಲ್ಲಿ ಬಂದು, ಬಾಲಕಿಯ ಇಚ್ಚೆಗೆ ವಿರುದ್ಧವಾಗಿ ಬಲವಂತವಾಗಿ ಅತ್ಯಾಚಾರ ಎಸಗಿರುತ್ತಾನೆ. ಬಳಿಕ ಈ ವಿಚಾರವನ್ನು ಯಾರಲ್ಲಿಯೂ ಹೇಳದಂತೆ ಬೆದರಿಕೆ ಒಡ್ಡಿ ಹೋಗಿರುತ್ತಾನೆ.
ಸದ್ರಿ ಘಟನೆಯ ಬಳಿಕವೂ ಅರೋಪಿತನು ಬಾಲಕಿಯನ್ನು ಬೆದರಿಸಿ ಇದೇ ರೀತಿ 7-8 ಬಾರಿ ದೈಹಿಕ ಸಂಪರ್ಕ ಮಾಡಿದ್ದು, 2024 ರ ಅಕ್ಟೋಬರ್ ತಿಂಗಳಲ್ಲಿ ಕೊನೆ ಬಾರಿ ದೈಹಿಕ ಸಂಪರ್ಕ ಮಾಡಿರುತ್ತಾನೆ. ಆ ಬಳಿಕ ಕೆಲ ಸಮಯದಿಂದ ಬಾಲಕಿಯ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ, ಚಿಕಿತ್ಸೆಗಾಗಿ ಬಾಲಕಿಯ ತಾಯಿ ಆಕೆಯನ್ನು ಎಪ್ರಿಲ್ 5 ರಂದು ಪುತ್ತೂರು ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿದೆ. ಅಪ್ರಾಪ್ತೆ ಸಂತ್ರಸ್ತೆ ಬಾಲಕಿಯನ್ನು ಬೆದರಿಸಿ ಅತ್ಯಾಚಾರ ಎಸಗಿರುವ ಹಿನ್ನೆಲೆಯಲ್ಲಿ ಆರೋಪಿತನ ವಿರುದ್ಧ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಲಂ 64(2) (m), 352(3) BNS 2023 ಮತ್ತು ಕಲಂ 5(l) ಜೊತೆಗೆ 6 POCSO Act 2012 ರಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment