ಬೆಂಗಳೂರು, ಎಪ್ರಿಲ್ 19, 2025 (ಕರಾವಳಿ ಟೈಮ್ಸ್) : 2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಯುಜಿಸಿಇಟಿ) ಎಪ್ರಿಲ್ 15 ರಿಂದ 17ರವರೆಗೆ ನಡೆದಿದ್ದು, ಇದೀಗ ತಮ್ಮ ವಿದ್ಯಾರ್ಥಿಗಳು ಸಿಇಟಿ ಅರ್ಜಿಯಲ್ಲಿ ಏನಾದರೂ ತಪ್ಪುಗಳಿದ್ದು, ಅವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಇಚ್ಛಿಸುವವರಿಗೆ ಮೇ 2 ರವರೆಗೂ ಅವಕಾಶ ಕಲ್ಪಿಸಲಾಗಿದೆ. ಮೀಸಲಾತಿ, ವಿಶೇಷ ಪ್ರವರ್ಗ, ಶೈಕ್ಷಣಿಕ ವಿವರಗಳು, ಕ್ಲಾಸ್ ಕೋಡ್ (ಎ, ಬಿ, ಸಿ, ಡಿ, ಇ, ಎಫ್, ಜಿ, ಎಚ್, ಐ, ಜೆ, ಕೆ, ಎಲ್, ಎಂ, ಎನ್, ಓ, ಝೆಡ್) ಇತ್ಯಾದಿ ತಪ್ಪಾಗಿದ್ದರೆ ಅವುಗಳನ್ನು ಸರಿ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕ ಎಚ್ ಪ್ರಸನ್ನ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಅಭ್ಯರ್ಥಿಗಳ ಹೆಸರು, ತಂದೆ/ ತಾಯಿ ಹೆಸರು, ಜನ್ಮ ದಿನಾಂಕ, 10ನೇ ತರಗತಿ ಹಾಗೂ 12ನೇ ತರಗತಿಯ ನೋಂದಣಿ ಸಂಖ್ಯೆ ಇತ್ಯಾದಿ ಮಾಹಿತಿಗಳು ತಪ್ಪಾಗಿ ನಮೂದು ಮಾಡಿದ್ದಲ್ಲಿ ದಾಖಲೆ ಸಮೇತ ಪ್ರಾಧಿಕಾರಕ್ಕೆ ಬಂದು ಮನವಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ಕೃಷಿಕರ ಕೋಟಾದಡಿ ಪ್ರಾಯೋಗಿಕ ಪರೀಕ್ಷೆ ಬರೆಯಲು ಸಿಇಟಿ ಅರ್ಜಿಯಲ್ಲಿ ನಮೂದಿಸದೇ ಇದ್ದಲ್ಲಿ ಎಪ್ರಿಲ್ 20ರೊಳಗೆ ತಿದ್ದುಪಡಿ ಮಾಡಿಕೊಳ್ಳಬೇಕು. ಹೊಸದಾಗಿ ಕೃಷಿಕರ ಕೋಟಾ ನಮೂದಿಸಿದವರು ಎಪ್ರಿಲ್ 21 ರಂದು ತಮ್ಮ ದಾಖಲೆಗಳನ್ನು ಕೆಇಎ ವೆಬ್‍ಸೈಟ್‍ನಲ್ಲಿ ಅಪ್‍ಲೋಡ್ ಮಾಡಬೇಕು ಎಂದವರು ತಿಳಿಸಿದ್ದಾರೆ.
ಇನ್ನು ಸಿಇಟಿ ಪರೀಕ್ಷೆಗೆ ಸಂಬಂಧಪಟ್ಟಂತೆ ಶುಕ್ರವಾರವೇ ಎಲ್ಲ ನಾಲ್ಕು ವಿಷಯಗಳ 16 ವರ್ಷನ್‍ಗಳ ಕೀ ಉತ್ತರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದೆ. ಭೌತವಿಜ್ಞಾನ, ರಸಾಯನವಿಜ್ಞಾನ, ಗಣಿತ ಮತ್ತು ಜೀವ ವಿಜ್ಞಾನ ವಿಷಯಗಳ ಕೀ ಉತ್ತರಗಳನ್ನು ಪ್ರಕಟಿಸಿದ್ದು, ಆಕ್ಷೇಪಣೆಗಳಿದ್ದಲ್ಲಿ ಎಪ್ರಿಲ್ 22ರ ಸಂಜೆ 5 ಗಂಟೆ ಒಳಗೆ ಆನ್‍ಲೈನ್ ಮೂಲಕ ಸಲ್ಲಿಸಬಹುದು ಎಂದು ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆಕ್ಷೇಪಣೆ ಸಲ್ಲಿಸುವ ಸಂದರ್ಭದಲ್ಲಿ ಪತ್ರಿಕೆಯ ವಿವರ, ಪರೀಕ್ಷಾ ದಿನಾಂಕ, ವರ್ಷನ್ ಕೋಡ್, ಪ್ರಶ್ನೆ ಸಂಖ್ಯೆ ಹಾಗೂ ಪೂರಕ ದಾಖಲೆಗಳನ್ನು ಪಿಡಿಎಫ್ ರೂಪದಲ್ಲಿ ಸಲ್ಲಿಸಬೇಕು. ಈ ಮಾಹಿತಿ ಸರಿ ಇಲ್ಲದಿದ್ದಲ್ಲಿ ಅಂತಹ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
0 comments:
Post a Comment