ಬಂಟ್ವಾಳ, ಎಪ್ರಿಲ್ 08, 2025 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಮಂಗಳವಾರ ಸಂಜೆ ಬೀಸಿದ ಭಾರೀ ಬಿರುಗಾಳಿಗೆ ಇಲ್ಲಿನ ಪುರಸಭಾ ವ್ಯಾಪ್ತಿಯ ಪ್ರಮುಖ ಪಟ್ಟಣವಾಗಿರುವ ಬಿ ಸಿ ರೋಡಿನಾದ್ಯಂತ ಹೆದ್ದಾರಿ ಬದಿಯಲ್ಲಿ ನಿಯಮ ಮೀರಿ ಅಳವಡಿಸಲಾಗಿದ್ದ ಬಹುತೇಕ ಬ್ಯಾನರ್, ಫ್ಲೆಕ್ಸ್ ಗಳು ಧರಾಶಾಹಿಯಾಗಿರುವ ದೃಶ್ಯ ಕಂಡು ಬಂತು.
ಇಲ್ಲಿನ ಪುರಸಭೆ ಹಾಗೂ ಪೊಲೀಸ್ ಇಲಾಖೆ ಸಾಕಷ್ಟು ಕಟ್ಟುನಿಟ್ಟಿನ ಸೂಚನೆ ನೀಡುತ್ತಿದ್ದರೂ ಅದೆಲ್ಲವನ್ನೂ ಗಾಳಿಗೆ ತೂರಿ ಕೆಲವೊಂದು ಪ್ರಭಾವ ಬಳಸಿ ವಿವಿಧ ಕಾರ್ಯಕ್ರಮಗಳ ಬ್ಯಾನರ್, ಫ್ಲೆಕ್ಸ್ ಗಳನ್ನು ಬಿ ಸಿ ರೋಡು ಪೇಟೆಯ ವಿವಿಧೆಡೆ ಹೆದ್ದಾರಿ ಬದಿಗಳಲ್ಲೇ ಅಪಾಯಕಾರಿ ಅಳವಡಿಸಲಾಗಿತ್ತು. ಮಂಗಳವಾರ ಬೀಸಿದ ಭಾರೀ ಬಿರುಗಾಳಿಗೆ ಇಲ್ಲಿನ ಬಹುತೇಕ ಬ್ಯಾನರ್-ಫ್ಲೆಕ್ಸ್ ಗಳು ನೆಲಕ್ಕರುಳಿವೆ. ಭಾರೀ ಗಾಳಿ-ಮಳೆ ಇದ್ದುದರಿಂದ ವಾಹನ ಹಾಗೂ ಜನ ಸಂಚಾರ ಅಸ್ತವ್ಯಸ್ತಗೊಂಡ ಹಿನ್ನಲೆಯಲ್ಲಿ ಯಾವುದೇ ಗಂಭೀರ ಅಪಾಯಗಳು ಸಂಭವಿಸಿಲ್ಲ ಎನ್ನುವುದಷ್ಟೆ ಸಮಾಧಾನದ ಸಂಗತಿ. ಇನ್ನು ಮುಂದಿನ ದಿನಗಳಲ್ಲಾದರೂ ಇಂತಹ ಆಯಕಟ್ಟಿನ ಸ್ಥಳಗಳಲ್ಲಿರುವ ಅಪಾಯಕಾರಿ ಬ್ಯಾನರ್-ಫ್ಲೆಕ್ಸ್ ಗಳಿಗೆ ಸ್ಥಳೀಯಾಡಳಿತ ಹಾಗೂ ಪೊಲೀಸ್ ಇಲಾಖೆ ಕಡಿವಾಣ ಹಾಕುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment