ಬಂಟ್ವಾಳ, ಮಾರ್ಚ್ 24, 2025 (ಕರಾವಳಿ ಟೈಮ್ಸ್) : ಅಪರಿಚಿತ ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಪಾದಚಾರಿ ಮಹಿಳೆ ಮೃತಪಟ್ಟ ಘಟನೆ ಪುದು ಗ್ರಾಮದ ಮಾರಿಪಳ್ಳ ಸಮೀಪದ ಹತ್ತನೇ ಮೈಲಿಕಲ್ಲು ಎಂಬಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೃತ ಮಹಿಳೆಯನ್ನು ಇಲ್ಲಿನ ನಿವಾಸಿ ವಸಂತಿ ಶೆಟ್ಟಿ (60) ಎಂದು ಹೆಸರಿಸಲಾಗಿದೆ. ಇವರು ಶುಕ್ರವಾರ ರಾತ್ರಿ ಸುಮಾರು 8.30ರ ವೇಳೆಗೆ ಹತ್ತನೇ ಮೈಲಿಕಲ್ಲಿ ಎಂಬಲ್ಲಿ ಹೆದ್ದಾರಿ ದಾಟುತ್ತಿದ್ದ ಸಮಯ ಫರಂಗಿಪೇಟೆ ಕಡೆಯಿಂದ ಬಂದ ಅಪರಿಚಿತ ಕಾರು ಡಿಕ್ಕಿ ಹೊಡೆದು ಪರಾರಿಯಾಗಿದೆ. ಅಪಘಾತದಿಂದ ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ತಕ್ಷಣ ಜನಪ್ರಿಯ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ವೇಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮೃತರ ಸಂಬಂಧಿ ಪ್ರಶಾಂತ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment