ಬೆಂಗಳೂರು, ಮಾರ್ಚ್ 22, 2025 (ಕರಾವಳಿ ಟೈಮ್ಸ್) : ಉಡುಪಿ ಮಲ್ಪೆ ಬಂದರಿನಲ್ಲಿ ಮೀನು ಕಳ್ಳತನದ ಆರೋಪ ಹೊರಿಸಿ ದಲಿತ ಸಮುದಾಯದ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ
ಘಟನೆಗೆ ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ (ಎ ಐ ಎಲ್ ಎ ಜೆ) ತೀವ್ರವಾಗಿ ಖಂಡಿಸಿದೆಯಲ್ಲದೆ ಸಂತ್ರಸ್ತ ಮಹಿಳೆಗೆ ರಕ್ಷಣೆ ನೀಡುವಂತೆ ಆಗ್ರಹಿಸಿದೆ.
ಉಡುಪಿಯ ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದ ಮೇಲೆ ವಿಜಯನಗರ ಜಿಲ್ಲೆ ಮೂಲದ ದಲಿತ ಲಂಬಾಣಿ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಂತ್ರಸ್ತ ಮಹಿಳೆಯು ಮೀನುಗಾರಿಕಾ ಬಂದರಿನಲ್ಲಿ ಕಾರ್ಮಿಕಳಾಗಿದ್ದು ಇಲ್ಲಿನ ಸ್ಥಳೀಯರು ಸೇರಿ ಹಲ್ಲೆ ನಡೆಸಿರುವ ಈ ಘಟನೆಯನ್ನು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ (ಎ ಐ ಎಲ್ ಎ ಜೆ) ಖಂಡಿಸುತ್ತದೆ. ಕಾನೂನನ್ನು ಕೈಗೆತ್ತಿಕೊಂಡು ಈ ರೀತಿ ಹಲ್ಲೆ ನಡೆಸುವುದು ಕಾನೂನು ವಿರೋಧಿ ಕೃತ್ಯವಾಗಿದ್ದು, ರಾಜ್ಯವೇ ತಲೆ ತಗ್ಗಿಸುವ ಘಟನೆಯಾಗಿದೆ. ಈ ಹಿಂದೆ ಆದಿ ಉಡುಪಿಯಲ್ಲಿ ನಡೆದ ಬೆತ್ತಲೆ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿದ್ದು ಆ ನಂತರ ನಡೆದ ಹಿಜಾಬ್ ಪ್ರಕರಣ ಕೂಡಾ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಇಲ್ಲಿ ಬಿಜೆಪಿ-ಸಂಘಪರಿವಾರ ಬಲಿಷ್ಟವಾಗಿದ್ದು ಇಡೀ ಜಿಲ್ಲೆ ಸಂಘಪರಿವಾರದ ಕಪಿಮುಷ್ಟಿಯಲ್ಲಿದೆ. ಇಲ್ಲಿನ ಶಾಸಕ ಯಶ್ಪಾಲ್ ಸುವರ್ಣ ಹಾಗೂ ಸ್ಥಳೀಯ ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಸಂತ್ರಸ್ತ ಮಹಿಳೆಯನ್ನು ಬೆದರಿಸಿ ದೂರನ್ನು ಹಿಂಪಡೆಯುವಂತೆ ಒತ್ತಡ ಹಾಕುತ್ತಿರುವ ಬಗ್ಗೆ ಸುದ್ದಿಯಾಗುತ್ತಿದೆ. ಸಂತ್ರಸ್ತ ಮಹಿಳೆಗೆ ಕೂಡಲೇ ರಕ್ಷಣೆ ನೀಡಬೇಕು ಹಾಗೂ ಸೂಕ್ತ ಕಾನೂನು ನೆರವು ನೀಡಬೇಕೆಂದು ಎ ಐ ಎಲ್ ಎ ಜೆ ಗೃಹ ಇಲಾಖೆಯನ್ನು ಒತ್ತಾಯಿಸಿದೆ.
ಈ ಪ್ರಕರಣದಲ್ಲಿ ಹಲವಾರು ಜನ ಭಾಗಿಯಾಗಿರುವ ಬಗ್ಗೆ ವೀಡಿಯೋದಲ್ಲಿ ಕಂಡು ಬರುತ್ತಿದೆ. ಘಟನೆಯಲ್ಲಿ ಭಾಗಿಯಾದ ಎಲ್ಲರನ್ನೂ ಯಾವುದೇ ಪ್ರಭಾವಕ್ಕೆ ಒಳಗಾಗದೇ ಕೂಡಲೇ ಬಂಧಿಸಬೇಕೆಂದು ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಪಾರ್ ಜಸ್ಟೀಸ್ ಆಗ್ರಹಿಸಿದೆ.
0 comments:
Post a Comment