ಕರಾವಳಿ ಟೈಮ್ಸ್ ರಮಳಾನ್ ವಿಶೇಷ ಲೇಖನ
- ಪಿ.ಎಂ.ಎ. ಪಾಣೆಮಂಗಳೂರು.
ಪವಿತ್ರ ಇಸ್ಲಾಮಿನ ಕಡ್ಡಾಯ ಕರ್ಮಗಳಲ್ಲೊಂದಾಗಿದೆ ರಂಝಾನ್ ತಿಂಗಳ ಉಪವಾಸ ವೃತಾಚರಣೆ. ಇಸ್ಲಾಮೀ ಕ್ಯಾಲೆಂಡರ್ ಪ್ರಕಾರ 9ನೇ ತಿಂಗಳಾಗಿರುವ ಪವಿತ್ರ ರಂಝಾನ್‍ನಲ್ಲಿ ಉಪವಾಸ ವೃತವನ್ನು ಆಚರಿಸುವುದು ಪ್ರಾಯ ಪೂರ್ತಿಯಾಗಿರುವ, ಬುದ್ದಿ ಇರುವ ಪ್ರತಿಯೊಬ್ಬ ಮುಸಲ್ಮಾನನಿಗೂ ಕಡ್ಡಾಯವಾಗಿದೆ. ಸದ್ರಿ ರಂಝಾನ್ ತಿಂಗಳು ಎಲ್ಲ ವರ್ಷದಂತೆ ಈ ವರ್ಷವೂ ನಮ್ಮನ್ನು ಸ್ವಾಗತಿಸಿದೆ ಅಲ್-ಹಂದುಲಿಲ್ಲಾಹ್ .... ಮಾನವ ಸಮುದಾಯದ ಅದರಲ್ಲೂ ಅಂತ್ಯ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಮಗೆ ಅಲ್ಲಾಹನು ಅನುಗ್ರಹೀತವಾಗಿ ನೀಡಿರುವ ಪುಣ್ಯ ಮಾಸವನ್ನು ಅತ್ಯುತ್ತಮ ರೀತಿಯಲ್ಲಿ ವ್ಯಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಪೂರ್ವಿಕ ಪ್ರವಾದಿಗಳ ಅನುಯಾಯಿಗಳು ಈ ಲೋಕದಲ್ಲಿ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿದ್ದು, ಅಷ್ಟೂ ವರ್ಷಗಳಲ್ಲಿ ಅವರು ಸೃಷ್ಟಿಕರ್ತನ ಆರಾಧನೆಯಲ್ಲಿ ತಲ್ಲೀನರಾಗುತ್ತಿದ್ದರು. ಆದರೆ ಅಂತ್ಯ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಅನುಯಾಯಿಗಳಾದ ನಮ್ಮ ಆಯುಷ್ಯವಾದರೋ ಕೇವಲ ಅರುವತ್ತೋ-ಎಪ್ಪತ್ತೋ ವರ್ಷಗಳ ಮಧ್ಯೆ ಇರುವ ಅಲ್ಪಾವಧಿಯಾಗಿದೆ. ಹೀಗಿರುತ್ತಾ ಪೂರ್ವಿಕ ಪ್ರವಾದಿಗಳ ಅನುಯಾಯಿಗಳ ದೀರ್ಘಾಯುಷ್ಯದ ಸತ್ಕರ್ಮಗಳೊಂದಿಗೆ ನಮ್ಮ ಅಲ್ಪಾಯುಷ್ಯದ ಆರಾಧನೆಗಳು ಸಮಾನವಾಗಲು ಅಲ್ಲಾಹನು ನಮಗೆ ಕೆಲವೊಂದು ಪುಣ್ಯವೇರಿದ ತಿಂಗಳು, ದಿವಸಗಳು ಹಾಗೂ ಸಮಯಗಳನ್ನು ನಿಗದಿಪಡಿಸಿದ್ದಾನೆ. ಅಂತಹ ಸಂದರ್ಭಗಳನ್ನು ಸಮರ್ಪಕವಾಗಿ ನಾವು ಬಳಸಿಕೊಂಡಿದ್ದೇ ಆದರೆ ಸಾವಿರಾರು ವರ್ಷಗಳ ಕಾಲ ಬಾಳಿ ಬದುಕಿ ಆರಾಧನಾ ಕರ್ಮಗಳನ್ನು ಕೈಗೊಂಡ ಪೂರ್ವಿಕ ಮಹಾನುಭಾವರ ಸತ್ಕರ್ಮಗಳನ್ನು ಮೀರಿದ ಪ್ರತಿಫಲವನ್ನು ಪಡೆಯುವ ಸದಾವಕಾಶ ನಮ್ಮ ಮುಂದಿದೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಪವಿತ್ರ ರಂಝಾನ್ ತಿಂಗಳು.
ರಮಳಾನ್ ಎಂಬುದರ ಭಾವಾರ್ಥವೇ ಸುಡುವುದು ಎಂದರ್ಥ. ಈ ತಿಂಗಳಲ್ಲಿ ಮುಸಲ್ಮಾನನೊಬ್ಬ ಎಲ್ಲಾ ಕೆಡುಕುಗಳಿಂದ ದೂರವಿದ್ದು, ಅಂತಃಶುದ್ದಿಯಿಂದ ಉಪವಾಸ ವೃತವನ್ನು ಅಲ್ಲಾಹನಿಗಾಗಿ ಆಚರಿಸಿದರೆ ಆತನ ಜೀವಿತದಲ್ಲಿ ಆತ ಕೈಗೊಂಡ ಸಕಲ ಪಾಪಗಳನ್ನು ಅಲ್ಲಾಹನು ಸುಟ್ಟು ಹಾಕುವನು. ಅಲ್ಲದೆ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಹದೀಸ್‍ವೊಂದರಲ್ಲಿ ಸ್ಪಷ್ಟವಾಗಿ ಹೇಳುತ್ತಾರೆ : “ಪವಿತ್ರ ರಮಳಾನಿನ ಆಗಮನದೊಂದಿಗೆ ಯಾವೊಬ್ಬ ಮುಸಲ್ಮಾನ ಸಂತೋಷದಿಂದ ಪುಳಕಿತಗೊಳ್ಳುತ್ತಾನೋ ಆತನ ಶರೀರವನ್ನು ಅಲ್ಲಾಹನು ಎಲ್ಲಾ ನರಕಗಳಿಂದ ನಿಷಿದ್ದಗೊಳಿಸುತ್ತಾನೆ”. ಅಂದರೆ ಕೇವಲ ರಮಳಾನಿನ ಆಗಮನದೊಂದಿಗೇ ಮುಸಲ್ಮಾನನೊಬ್ಬನ ವಿಜಯ ಪ್ರಾರಂಭವಾಗುತ್ತದೆ. ನಂತರ ಈ ತಿಂಗಳಲ್ಲಿ ಕೈಗೊಳ್ಳುವ ಎಲ್ಲಾ ಸತ್ಕರ್ಮಗಳಿಗೂ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಸತ್ಕರ್ಮಗಳಿಗಿಂತ ದುಪ್ಪಟ್ಟು ಪ್ರತಿಫಲವನ್ನು ಪಡೆಯುತ್ತಾನೆ. ರಮಳಾನಿನಲ್ಲಿ ಒಂದು ಕಡ್ಡಾಯ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ 70 ಸತ್ಕರ್ಮಗಳ ಪ್ರತಿಫಲವೂ, ಐಚ್ಛಿಕ ಕರ್ಮವನ್ನು ಕೈಗೊಂಡರೆ ಉಳಿದ ಸಮಯಗಳಲ್ಲಿ ಕೈಗೊಳ್ಳುವ ಕಡ್ಡಾಯ ಕರ್ಮದ ಪ್ರತಿಫಲವೂ ಪ್ರಾಪ್ತವಾಗುತ್ತದೆ.
ರಮಳಾನಿನಲ್ಲಿ ಕೈಗೊಳ್ಳುವ ಉಪವಾಸ ವೃತವು ಕೇವಲ ಅನ್ನಾಹಾರ, ಪಾನೀಯಾದಿಗಳನ್ನು ತೊರೆಯುವುದಕ್ಕೆ ಮಾತ್ರ ಸೀಮಿತಗೊಳಿಸದೆ, ಸಕಲ ದೇಹೇಚ್ಚೆಗಳಿಂದ ದೂರವಿದ್ದರೆ ಮಾತ್ರ ಉಪವಾಸ ವೃತದ ಪರಿಪೂರ್ಣ ಪ್ರತಿಫಲ ದೊರೆಯಲು ಸಾಧ್ಯ. ಶರೀರದ ಯಾವುದಾದರೊಂದು ಅಂಗದ ಮುಖಾಂತರ ಕೈಗೊಳ್ಳುವ ಒಂದು ಸಣ್ಣ ತಪ್ಪಾದರೂ ಅದು ಅಂದಿನ ಆತನ ಉಪವಾಸದ ಪ್ರತಿಫಲದಲ್ಲಿ ಕೊರತೆಯನ್ನು ಅನುಭವಿಸುವಂತೆ ಮಾಡುತ್ತದೆ. ರಮಳಾನಿನ ರಾತ್ರಿ ಸಮಯದಲ್ಲಿ ತರಾವೀಹ್ ಎಂಬ ಸುನ್ನತ್ ನಮಾಜ್ ಪ್ರತ್ಯೇಕ ಸುನ್ನತಾಗಿದ್ದು, ಸಾಮಾನ್ಯವಾಗಿ ಎಲ್ಲ ಮಸೀದಿಗಳಲ್ಲೂ ಅದನ್ನು ಸಾಮೂಹಿಕವಾಗಿ ನೆರವೇರಿಸಲಾಗುತ್ತದೆ. ಕನಿಷ್ಠ ಪಕ್ಷ ಅಂತಹ ಸತ್ಕರ್ಮಗಳಲ್ಲಾದರೂ ಪಾಲ್ಗೊಳ್ಳುವ ಮೂಲಕ ರವiಳಾನ್ ತಿಂಗಳ ಸಾರ್ಥಕತೆಗೆ ಪ್ರಯತ್ನಿಸಬೇಕಾಗಿದೆ.
ಇಬಾದತ್ ಹೆಚ್ಚಿಸುವುದರೊಂದಿಗೆ ಪಾರತ್ರಿಕ ವಿಜಯದ ಉದ್ದೇಶದ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಂಡು ಬರುವ ಮಹತ್ತರ ಸಂದೇಶದೊಂದಿಗೆ ಮುಸ್ಲಿಂ ಉಮ್ಮತ್ತನ್ನು ಸ್ವಾಗತಿಸಿರುವ ಪವಿತ್ರವೂ ಪರಮ ಪಾವನವೂ ಆಗಿರುವ ವಿಶುದ್ದ ರಮಳಾನ್ ತಿಂಗಳು ಕೇವಲ ಇಫ್ತಾರ್ ಆಯೋಜನೆಯ ಹೊಟ್ಟೆ ತುಂಬಿಸುವ ಕಾರ್ಯಕ್ರಮ ಹಾಗೂ ರಮಳಾನ್ ಅಂತ್ಯದಲ್ಲಿ ಬರುವ ಈದುಲ್ ಫಿತ್ರ್ ಹಬ್ಬದ ಸಿದ್ದತೆಯಲ್ಲಿ ಕಳೆಯುವ ಬದಲು ರಮಳಾನಿನ ಪ್ರತಿ ದಿನ, ಪ್ರತಿ ತಾಸು, ಪ್ರತಿ ನಿಮಿಷ, ಪ್ರತಿ ಕ್ಷಣಗಳೂ ಅತ್ಯಮೂಲ್ಯ ಎಂಬುದನ್ನು ಮನನ ಮಾಡಿಕೊಂಡು ಈ ಮಾಸದಲ್ಲಿ ಶಕ್ತಿ ಮೀತಿ ಆರಾಧನೆಗಳನ್ನು ಹೆಚ್ಚಿಸುವ ಅನಿವಾರ್ಯತೆ ಇದೆ. ಈ ತಿಂಗಳ ಜೀವನ ಕ್ರಮವೇ ಸತ್ಕರ್ಮಗಳಾಗಿ ಮಾರ್ಪಾಟುಗೊಳ್ಳಬೇಕಿದೆ.
ಹಬ್ಬ, ಸಂಭ್ರಮದ ಹೆಸರಿನಲ್ಲಿ ಒಂದು ಕ್ಷಣ ಆಚರಿಸುವ ಅನಿಸ್ಲಾಮಿಕ ಕಾರ್ಯಕ್ರಮಗಳು ನಮ್ಮ ಶಾಶ್ವತ ಇಹ-ಪರ ನಷ್ಟಕ್ಕೆ ಹೇತು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳವಬೇಕಿದೆ. ಇಸ್ಲಾಮಿನಲ್ಲಿ ಸಂಭ್ರಮಗಳ ಆಚರಣೆಗೂ ಒಂದು ಮಿತಿಯಿದೆ. ಅವುಗಳನ್ನು ಪಾಶ್ಚಾತ್ಯ ಆಚರಣೆಗಳೊಂದಿಗೆ ಸಮೀಕರಿಸುವುದನ್ನು ಇಸ್ಲಾಂ ಯಾವತ್ತೂ ಒಪ್ಪುವುದಿಲ್ಲ. ಸಂಭ್ರಮದ ಆಚರಣೆಯಲ್ಲೂ ಸೃಷ್ಟಿಕರ್ತನಾದ ಅಲ್ಲಾಹನ ಸ್ಮರಣೆಯನ್ನು ಅಧಿಕಗೊಳಿಸಲು ಇಸ್ಲಾಂ ಕಲ್ಪಿಸುತ್ತದೆ. ಹಬ್ಬಗಳ ಹೆಸರಿನಲ್ಲಿ ಒಂದು ಕ್ಷಣ ಕೈಗೊಳ್ಳುವ ಅನಿಸ್ಲಾಮಿಕ ಸಂಭ್ರಮಾಚರಣೆ ಮುಸಲ್ಮಾನನೊಬ್ಬನ ಜೀವಮಾನವಿಡೀ ಸಂಪಾದಿಸಿದ ಸತ್ಕರ್ಮಗಳ ವಿನಾಶಕ್ಕೆ ಹೇತುವಾಗುವ ಸಾಧ್ಯತೆ ಇದೆ.
ಪವಿತ್ರ ರಮಳಾನ್ ಈಗಾಗಲೇ ನಮ್ಮನ್ನು ಸ್ವಾಗತಿಸಿದೆ. ರಮಳಾನ್ ತಿಂಗಳ ಪ್ರತಿಯೊಂದು ದಿವಸಗಳು, ಸಮಯಗಳು, ಕ್ಷಣಗಳೂ ಮುಸ್ಲಿಂ ಉಮ್ಮತ್ತಿನ ಪಾಲಿಗೆ ಅತ್ಯಂತ ಬೆಲೆಬಾಳುವಂತದ್ದು. ಪವಿತ್ರ ರಮಳಾನ್ ನಮ್ಮನ್ನು ಬೀಳ್ಕೊಡುವಾಗ ಯಾವತ್ತೂ ಶಪಿಸುತ್ತಾ ಬೀಳ್ಕೊಡುವ ಸನ್ನಿವೇಶ ನಿರ್ಮಾಣವಾಗಬಾರದು. ಒಂದು ವೇಳೆ ರಮಳಾನ್ ತಿಂಗಳು ಮುಸ್ಲಿಮನನ್ನು ಶಪಿಸುತ್ತಾ ವಿದಾಯ ಕೋರಿದರೆ ಅದು ಆತನ ಇಡೀ ಪಾರತ್ರಿಕ ಜೀವನದ ವಿನಾಶಕ್ಕೆ ಸಾಕಾದೀತು. ರಮಳಾನ್ ತಿಂಗಳಿನಲ್ಲಿ ಕಳೆದು ಹೋಗುವ ಪ್ರತಿಯೊಂದು ಅತ್ಯಮೂಲ್ಯ ಕ್ಷಣವೂ ನಮ್ಮ ಜೀವನದಲ್ಲಿ ಮತ್ತೊಮ್ಮೆ ಮರಳಿ ಪಡೆಯಬಹುದು ಎಂಬ ವಿಶ್ವಾಸ ನಮಗ್ಯಾರಿಗೂ ಇರುವುದಿಲ್ಲ. ಅಂದರೆ ಕಾಲವು ಅಂತಿಮ ಘಟ್ಟಕ್ಕೆ ಸಮೀಪಿಸುತ್ತಿದೆ. ಅಂತ್ಯ ದಿವಸದ ಎಲ್ಲ ಪ್ರಮುಖ ಲಕ್ಷಣಗಳನ್ನು ನಾವು ನಮ್ಮ ಕಣ್ಣಲ್ಲಿ ಕಾಣಲು ಆರಂಭಿಸಿದ್ದೇವೆ. ಅವುಗಳಲ್ಲಿ ಪ್ರಮುಖ ಒಂದಾಗಿದೆ ಮಾನವನ ಮರಣ ಅಧಿಕಗೊಳ್ಳುವುದು. ಇದನ್ನು ಇಂದು ನಾವು ವ್ಯಾಪಕವಾಗಿ ಅನುಭವ ವೇದ್ಯವಾಗಿ ಕಾಣುತ್ತಿದ್ದೇವೆ. ಯಾವುದೇ ರೋಗ ಲಕ್ಷಣಗಳಿಲ್ಲದೆ, ಮರಣದ ಬಗ್ಗೆ ನಿರೀಕ್ಷಿಸಿಯೇ ಇರದಂತಹ ಅದೆಷ್ಟೋ ಮಂದಿಗಳು ದಿನದಿಂದ ದಿನಕ್ಕೆ ನಮ್ಮಿಂದ ಕಣ್ಮರೆಯಾಗುತ್ತಿದ್ದಾರೆ. ಇಂದಲ್ಲ ನಾಳೆ ನಮಗೂ ಇದೇ ಗತಿ ಎಂಬುದನ್ನೂ ಯಾವತ್ತೂ ನಾವು ಯೋಚಿಸಿದ್ದೇ ಇಲ್ಲ. ಅಂತಹ ಯೋಚನೆಯನ್ನು ಕೈಗೊಳ್ಳುವ ಅವಕಾಶ ನಮಗೆ ಒದಗಿ ಬಂದೇ ಇಲ್ಲ ಎಂಬುದೇ ನಮ್ಮ ದೌರ್ಭಾಗ್ಯ. ನಿಮಿಷ-ನಿಮಿಷಕ್ಕೂ ಮರಣ ವಾರ್ತೆಗಳನ್ನು ಕೇಳುತ್ತಿರುವ ಕಾಲಘಟ್ಟದ ಮಧ್ಯೆಯೂ ಸರ್ವಶಕ್ತನಾದ ಅಲ್ಲಾಹನು ನಮ್ಮ ಪಾಲಿಗೆ ಈ ವರ್ಷದ ರಮಳಾನ್ ತಿಂಗಳನ್ನೂ ಸ್ವಾಗತಿಸಲು ಸೌಭಾಗ್ಯ ಒದಗಿಸಿದ್ದಕ್ಕಾಗಿ ಸದಾ ಸಮಯ ಅಲ್ಲಾಹನಿಗೆ ಸ್ತುತಿ ಅರ್ಪಿಸಬೇಕಾಗಿದೆ. ಅಲ್ ಹಂದುಲಿಲ್ಲಾಹಿ ಸುಮ್ಮ ಅಲ್-ಹಂದುಲಿಲ್ಲಾಹ್ ಅಲಾ ಕುಲ್ಲಿ ಹಾಲ್ ಅಲ್ಫ ಅಲ್ಫ ಮರ್ರಃ.
ಆದುದರಿಂದ ನಮ್ಮ ಪಾಲಿಗೆ ವರದಾನವಾಗಿ ಆಗಮಿಸಿರುವ ಪರಿಶುದ್ದ ರಮಳಾನ್ ತಿಂಗಳಿನ ಪ್ರತೀ ಕ್ಷಣವೂ ಯಾವುದೇ ಕಾರಣಕ್ಕೂ ವ್ಯರ್ಥವಾಗದೆ ಅಲ್ಲಾಹನ ಸಂಪ್ರೀತಿ ಗಳಿಕೆಯ ನಿಟ್ಟಿನಲ್ಲಿ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಪ್ರಯತ್ನಿಸಬೇಕಾಗಿದೆ. ನಾವು ನಿರ್ವಹಿಸುವ ಸಕಲ ಸತ್ಕರ್ಮಗಳು ಲೋಕಮಾನ್ಯತೆಯ ಉದ್ದೇಶದಿಂದ ಮುಕ್ತಗೊಂಡು ದೇವ ಸಂಪ್ರೀತಿಯ ಏಕಮಾತ್ರ ಉದ್ದೇಶವನ್ನು ಹೊಂದಿರುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಸರ್ವ ಶಕ್ತನಾದ ಅಲ್ಲಾಹು ನಮಗೆಲ್ಲರಿಗೂ ಅನುಗ್ರಹಿಸಲಿ.... ಆಮೀನ್.. ಯಾ ರಬ್ಬಲ್ ಆಲಮೀನ್ .....
0 comments:
Post a Comment