ಮಂಗಳೂರು, ಮಾರ್ಚ್ 24, 2025 (ಕರಾವಳಿ ಟೈಮ್ಸ್) : ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಅಧಿವೇಶನದಲ್ಲಿ ಗದ್ದಲ ಸೃಷ್ಟಿಸಿದ್ದ 18 ಶಾಸಕರನ್ನು 6 ತಿಂಗಳ ಕಾಲ ಅಮಾನತುಗೊಳಿಸಿದ ತಮ್ಮ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡ ಸ್ಪೀಕರ್ ಯು.ಟಿ. ಖಾದರ್, ‘ದುಂಡಾವರ್ತನೆ ಮುಂದುವರಿಸಿದರೆ’ ಶಾಸಕರನ್ನು ವಜಾಗೊಳಿಸುವುದು ಸೇರಿದಂತೆ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಮಂದಿಗೆ ಪ್ರತಿಕ್ರಯಿಸಿದ ಅವರು, ಅಧಿವೇಶನದ ಕೊನೆಯ ದಿನವಾಗಿದ್ದರಿಂದ ಗದ್ದಲ ಸೃಷ್ಟಿಸುವ ಮೂಲಕ ತಪ್ಪಿಸಿಕೊಳ್ಳಬಹುದು ಎಂದು ಅಮಾನತುಗೊಂಡ ಶಾಸಕರು ಭಾವಿಸಿದ್ದರು ಮತ್ತು ಅವರಲ್ಲಿ ಮೊದಲ ಬಾರಿಗೆ ಶಾಸಕರಾಗಿರುವ ಕೆಲವರಿಗೆ ಪರಿಸ್ಥಿತಿಯ ಗಂಭೀರತೆಯ ಅರಿವೂ ಇರಲಿಲ್ಲ ಎಂದರು.
ಅಮಾನತುಗೊಂಡ ಶಾಸಕರು ತಮ್ಮ ಸ್ನೇಹಿತರು ಎಂದ ಸ್ಪೀಕರ್, ಶಾಸಕರು ತಮ್ಮ ಅಮಾನತು ಶಿಕ್ಷೆ ಎಂದು ಪರಿಗಣಿಸಬಾರದು. ಆದರೆ ತಮ್ಮನ್ನು ಉತ್ತಮ ಸಾರ್ವಜನಿಕ ಪ್ರತಿನಿಧಿಗಳಾಗಿ ಪರಿವರ್ತಿಸಿಕೊಳ್ಳಲು ಮತ್ತು ತಮ್ಮ ಮಾರ್ಗಗಳನ್ನು ಸರಿಪಡಿಸಿಕೊಳ್ಳಲು ಒಂದು ಅವಕಾಶ ಎಂದು ಭಾವಿಸಬೇಕು. “ತಪ್ಪು ಮಾಡಿದವರು ಅದನ್ನು ಅರಿತುಕೊಳ್ಳಬೇಕು. ಅವರು ತಮ್ಮ ಕೃತ್ಯವನ್ನು ಟಿವಿ ಮುಂದೆ ಕುಳಿತು ನೋಡಬೇಕು” ಎಂದವರು ಕಿವಿ ಮಾತು ಹೇಳಿದರು.
ಒಂದು ವೇಳೆ ಅವರು ಗದ್ದಲ ಸೃಷ್ಟಿಸುವುದನ್ನು ಮತ್ತು ‘ಸ್ಪೀಕರ್’ ಪೀಠವನ್ನು ಅವಮಾನಿಸುವುದನ್ನು ಮುಂದುವರಿಸಿದರೆ, ನಾನು ಅವರ ವಿರುದ್ಧ ಒಂದು ವರ್ಷದ ಅಮಾನತು ಸೇರಿದಂತೆ ತೀವ್ರ ಕ್ರಮಗಳನ್ನು ತೆಗೆದುಕೊಳ್ಳುತ್ತೇನೆ ಎಂದು ಸ್ಪೀಕರ್ ಖಾದರ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಶಾಸಕರನ್ನು ಅಮಾನತುಗೊಳಿಸುವ ನಿರ್ಧಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರರ ಪಾತ್ರವಿಲ್ಲ. ಸದನದ ಘನತೆ, ಸಭಾಪತಿ, ಸಂವಿಧಾನ ಮತ್ತು ರಾಜ್ಯದ ಗೌರವವನ್ನು ಎತ್ತಿಹಿಡಿಯುವ ಸಲುವಾಗಿ ಈ ನಿರ್ಧಾರ ಅಗತ್ಯವಾಗಿತ್ತು ಎಂದ ಖಾದರ್ ಈ ಹಿಂದೆ ಇಂತಹ ಘಟನೆಗಳು ನಡೆದರೂ ಈ ರೀತಿಯ ಶಿಕ್ಷೆ ನೀಡಲಾಗಿಲ್ಲ ಎಂದಾದರೆ ಅದು ಹಿಂದಿನ ಸ್ಪೀಕರ್‍ಗಳಿಗೆ ಆ ಧೈರ್ಯ ಇರಲಿಲ್ಲ ಎಂದರ್ಥ. ಅದರಿಂದಾಗಿಯೇ ಶಾಸಕರು ಏನೂ ಆಗದು ಎಂಬ ಧೈರ್ಯದಲ್ಲಿ ಈ ರೀತಿ ವರ್ತಿಸಿ ರಾಜ್ಯದ ಘನತೆಗೆ ಕುಂದು ತಂದಿದ್ದಾರೆ. ಧನ ವಿನಿಯೋಗದ ಬಿಲ್ ಮಂಜೂರು ಆಗುವುದು ಕೊನೆಯ ದಿನದಂದು. ಅದನ್ನು ತಡೆಯುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ ಎಂದರು.
ಧನ ವಿನಿಯೋಗ ಬಿಲ್ ಮಂಜೂರು ಆಗದಿದ್ದರೆ, ವೇತನ ಪಾವತಿ, ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗುತ್ತದೆ. ಮತ್ತೆ ಬಿಲ್ ಮಂಡಿಸಲೂ ಆಗುವುದಿಲ್ಲ. ಅವರ ಆ ವರ್ತನೆಗೆ ಅಧಿವೇಶನ ಮುಗಿಯುವರೆಗೆ ಮಾತ್ರ ಮಾಡಿದರೆ, ಕೊನೆಯ ದಿನ ಈ ರೀತಿ ಮಾಡುವುದರಿಂದ ತಮಗೇನು ತೊಂದರೆ ಆಗದು ಎಂಬ ಕಲ್ಪನೆ ದೂರವಾಗಬೇಕು. ರಾಜ್ಯದಲ್ಲಿ ಸದನಕ್ಕಿಂತ ದೊಡ್ಡ ಸಂವಿಧಾನ ಸಂಸ್ಥೆ ಬೇರಿಲ್ಲ. ಅಧ್ಯಕ್ಷ ಪೀಠಕ್ಕಿಂತ ದೊಡ್ಡದು ಅಲ್ಲಿ ಬೇರೆ ಇಲ್ಲ ಎಂಬ ಅರಿವು ಶಾಸಕರಿಗೆ ಇರಬೇಕು. ಸಭಾಧ್ಯಕ್ಷನಾಗಿ ಈ ರೀತಿಯ ವರ್ತನೆ ಸಹಿಸಲು ಅಸಾಧ್ಯ. ಹಾಗಾಗಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಿನ್ನಾಭಿಪ್ರಾಯವೇ ಪ್ರಜಾಪ್ರಭುತ್ವದ ಸೌಂದರ್ಯ ಎಂದ ಖಾದರ್, ಹನಿ ಟ್ರ್ಯಾಪ್ ಆರೋಪಗಳ ಬಗ್ಗೆ ತನಿಖೆ ನಡೆಸುವುದಾಗಿ ಮತ್ತು ಸಿಬಿಐ ತನಿಖೆಗೆ ಅವರ ಬೇಡಿಕೆಗಳನ್ನು ಪರಿಗಣಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ ನಂತರವೂ ಈ ರಿತಿಯ ಪ್ರತಿಭಟನೆಯ ಅಗತ್ಯವಿಲ್ಲ ಎಂದು ಸ್ಪೀಕರ್ ಅಭಿಪ್ರಾಯಪಟ್ಟರು.
ಭವ್ಯವಾದ ವಿಧಾನಸೌಧ ಕಟ್ಟಡಕ್ಕೆ ಶಾಶ್ವತ ದೀಪಾಲಂಕಾರದ ಕೆಲಸಗಳು ಪೂರ್ಣಗೊಂಡಿವೆ ಮತ್ತು ಎಪ್ರಿಲ್ ಮೊದಲ ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದ ಸ್ಪೀಕರ್, ಪ್ರತಿ ಶನಿವಾರ ಹಾಗೂ ಭಾನುವಾರ ಸಂಜೆ 6 ರಿಂದ ರಾತ್ರಿ 9 ರವರೆಗೆ ವಿಧಾನ ಸೌಧವನ್ನು ದೀಪಾಲಂಕಾರ ಮಾಡಲಾಗುವುದು. ಇಲ್ಲಿಯವರೆಗೆ, ರಾಷ್ಟ್ರೀಯ ಹಬ್ಬಗಳಂತಹ ವಿಶೇಷ ಸಂದರ್ಭಗಳಲ್ಲಿ ದೀಪಾಲಂಕಾರ ಮಾಡಲಾಗುತ್ತಿತ್ತು ಮತ್ತು ಇದಕ್ಕೆ 15 ಲಕ್ಷದಿಂದ 20 ಲಕ್ಷ ರೂಪಾಯಿ ವೆಚ್ಚವಾಗುತ್ತಿತ್ತು ಎಂದರು.
0 comments:
Post a Comment