ರೈ ನೇತೃತ್ವದಲ್ಲಿ ಪಾಣೆಮಂಗಳೂರು ಸಾಗರ್ ಆಡಿಟೋರಿಯಂನಲ್ಲಿ ಸೌಹಾರ್ದ ಇಫ್ತಾರ್ ಕೂಟ
ಬಂಟ್ವಾಳ, ಮಾರ್ಚ್ 30, 2025 (ಕರಾವಳಿ ಟೈಮ್ಸ್) : ಸೌಹಾರ್ದ ಕಾರ್ಯಕ್ರಮಗಳಲ್ಲಿ ಅಧಿಕಾರ-ಅಂತಸ್ತಿನಲ್ಲಿರುವವರು ಗಟ್ಟಿ ಧ್ವನಿಯಲ್ಲಿ ಮಾತನಾಡಬೇಕು. ಇನ್ನೊಬ್ಬರ ಓಲೈಕೆಗಾಗಿ ಮಾತ್ರ ವರ್ತಿಸುವುದರಿಂದ ಸೌಹಾರ್ದ ನೆಲೆ ನಿಲ್ಲಲು ಸಾಧ್ಯವಿಲ್ಲ. ಅದಕ್ಕೆ ಗಟ್ಟಿ ನಿಲುವು ಅಗತ್ಯ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಸಾರಿದರು.
ತನ್ನದೇ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಪಾಣೆಮಂಗಳೂರು ಸಾಗರ್ ಅಡಿಟೋರಿಯಂನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸೌಹಾರ್ದ ಇಫ್ತಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಬಹುಸಂಖ್ಯಾತ ಸನಾತನ ಹಿಂದೂ ಧರ್ಮದಲ್ಲಿ ದೇವರು ನನಗೆ ಜನ್ಮಕೊಟ್ಟಿರುವ ಬಗ್ಗೆ ನನಗೆ ಅಭಿಮಾನವಿದೆ. ನನ್ನ ಹಿಂದೂ ಧರ್ಮ ನನಗೆ ಕಲಿಸಿಕೊಟ್ಟಿರುವ ಪರಧರ್ಮ ಸಹಿಷ್ಣುತೆಯನ್ನು ನಾನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ. ನನ್ನ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಸಮಾಜದ ಇತರ ಧರ್ಮೀಯರ ಜೊತೆ ಗೌರವದಿಂದ, ಸಹಿಷ್ಣುತೆಯಿಂದ ಪ್ರಾಮಾಣಿಕವಾಗಿ ವರ್ತಿಸಿದಾಗ ಮಾತ್ರ ಸೌಹಾರ್ದತೆ ನೆಲೆ ನಿಲ್ಲುತ್ತದೆ ಎಂದರು.
ನಾನು ಪ್ರಸ್ತುತ ರಾಜಕೀಯದಲ್ಲಿ ಪ್ರಬುದ್ದನಾಗಿಲ್ಲದೆ ಇರಬಹುದು. ಆದರೆ ನಾನು ನನ್ನ ಸಾಮಾಜಿಕ ಜವಾಬ್ದಾರಿಯಿಂದ ಯಾವತ್ತೂ ವಿಮುಖನಾಗಿಲ್ಲ. ನನ್ನ ಜವಾಬ್ದಾರಿ ನಿರ್ವಹಣೆಗೆ ನಾನು ಸದಾ ಬದ್ದನಾಗಿದ್ದೇನೆ ಎಂದ ರಮಾನಾಥ ರೈ ಅವರು, ಮುಸ್ಲಿಮರು ಕೈಗೊಳ್ಳುವ ಉಪವಾಸ ವೃತ ಎಂಬುದು ಮನಸ್ಸಿನ ಕಲ್ಮಶಗಳನ್ನು ತೊಳೆಯಲು ಇರುವ ಒಂದು ಅತ್ಯಂತ ದೊಡ್ಡ ಅಸ್ತ್ರವಾಗಿದೆ. ದೇಹದಲ್ಲಿರುವ ಕಲ್ಮಶಗಳನ್ನು ಶುದ್ದೀಕರಿಸಲು ಸಾಬೂನು, ಸುಗಂಧ ದ್ರವ್ಯಗಳಂತಹ ವಸ್ತುಗಳು ಚಾಲ್ತಿಯಲ್ಲಿದೆ. ಆದರೆ ಮನಸ್ಸಿನ ಕಲ್ಮಶಗಳನ್ನು ತೊಳೆದು ಶುದ್ದೀಕರಿಸುವ ನಿಟ್ಟಿನಲ್ಲಿ ಧಾರ್ಮಿಕ ಆಚರಣೆಗಳು ಪ್ರಯೋಜನವಾಗುತ್ತಿದೆ. ಮುಸಲ್ಮಾನರು ಕೈಗೊಳ್ಳುವ ಉಪವಾಸ ವೃತ ಮನಸ್ಸು ಶುದ್ದೀಕರಣಗೊಳ್ಳುತ್ತದೆ. ಅದನ್ನು ಅವರು ಚಾಚೂ ತಪ್ಪದೆ ಪಾಲಿಸುತ್ತಾರೆ. ಅವರ ಧಾರ್ಮಿಕ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಇಂತಹ ಸೌಹಾರ್ದ ಇಫ್ತಾರ್ ಕೂಟವನ್ನು ಪ್ರತಿವರ್ಷ ನಾನು ಏರ್ಪಡಿಸುತ್ತಿದ್ದೇನೆ. ಇದರಲ್ಲಿ ನನಗೆ ಅಭಿಮಾನವಿದೆ. ಆತ್ಮ ಸಂತೃಪ್ತಿ ಇದೆ. ಮನಸ್ಸು ಶುದ್ದೀಕರಣಗೊಂಡಾಗ ಇಡೀ ಸಮಾಜ ಶುದ್ದೀಕರಣ ಆಗುತ್ತದೆ. ಮನಷ್ಯ ಮನಸ್ಸುಗಳ ನಡುವೆ ಅಂತರ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಅದು ಆಗಬೇಕಾದ ಅನಿವಾರ್ಯತೆ ಹೆಚ್ಚಾಗಿದೆ ಎಂದು ಹೇಳಿದರು.
ಕೆಲವರು ಇಸ್ಲಾಂ ಧರ್ಮದ ಬಗ್ಗೆ ವಿನಾ ಕಾರಣ ಅಪಪ್ರಚಾರಗಳನ್ನು ಮಾಡಿ ಒಂದು ಧರ್ಮಕ್ಕೆ, ಆ ಧರ್ಮದ ಅನುಯಾಯಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಆದರೆ ಧರ್ಮಗಳು ಹೇಗಿದೆ ಅದರ ಸಾರಗಳು ಹೇಗಿದೆ ಎಂಬುದೆಲ್ಲವೂ ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೂ ರಾಜಕೀಯ ಅಸ್ತಿತ್ವಕ್ಕೆ ಬೇಕಾಗಿ ಅವರು ನಡೆಸುವ ಇಂತಹ ಅಪಪ್ರಚಾರಗಳು ಅವರು ಅನುಸರಿಸುತ್ತಿರುವ ಧರ್ಮಕ್ಕೆ ಮಾಡುವ ಅವಮಾನ ಎಂಬುದನ್ನು ಅಂತಹವರು ತಿಳಿದುಕೊಳ್ಳಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಕಿವಿ ಮಾತು ಹೇಳಿದರು.
ಅಲ್ಲಿಪಾದೆ ಚರ್ಚ್ ಧರ್ಮಗುರು ರೆ ಫಾ ರಾಬರ್ಟ್ ಡಿ ಸೋಜ, ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ರಫೀವುದ್ದೀನ್ ಕುದ್ರೋಳಿ, ಎಂಎಲ್ಸಿ ಐವನ್ ಡಿ ಸೋಜ, ಬುಡಾ ಅಧ್ಯಕ್ಷ ಬೇಬಿ ಕುಂದರ್, ಬಂಟ್ವಾಳ ಪುರಸಭಾಧ್ಯಕ್ಷ ಬಿ ವಾಸು ಪೂಜಾರಿ ಲೊರೆಟ್ಟೊ, ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ಶಾಂತಿ ಅಂಗಡಿ, ರಾಜೀವ್ ಗಾಂಧಿ ಆರೋಗ್ಯ ವಿವಿ ಸಿಂಡಿಕೇಟ್ ಸದಸ್ಯ ಡಾ ಯು ಟಿ ಇಫ್ತಿಕಾರ್ ಅಲಿ ಫರೀದ್, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಸದಸ್ಯರುಗಳಾದ ಪಿಯೂಸ್ ಎಲ್ ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ ಎಂ ಮುಸ್ತಫಾ ಸುಳ್ಯ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಚಂದ್ರಶೇಖರ್ ಭಂಡಾರಿ, ಬಾಲಕೃಷ್ಣ ಅಂಚನ್, ಪ್ರಮುಖರಾದ ಬಿ ಎಂ ಅಬ್ಬಾಸ್ ಅಲಿ, ಬಿ ಪದ್ಮಶೇಖರ್ ಜೈನ್, ಯೂಸುಫ್ ಕರಂದಾಡಿ, ಶಬೀರ್ ಸಿದ್ದಕಟ್ಟೆ, ಅಬ್ದುಲ್ ರಝಾಕ್ ಕುಕ್ಕಾಜೆ, ಮುನೀರ್ ಕಾಟಿಪಳ್ಳ, ಲುಕ್ಮಾನ್ ಬಿ ಸಿ ರೋಡು, ಶಶಿಧರ್ ಹೆಗ್ಡೆ, ಧರಣೇಂದ್ರ ಕುಮಾರ್, ಅಪ್ಪಿ, ನವೀನ್ ಡಿ ಸೋಜ, ಪೃಥ್ವಿರಾಜ್ ಆರ್ ಕೆ, ಜಯಂತಿ ಪೂಜಾರಿ, ಸುದೀಪ್ ಕುಮಾರ್ ಶೆಟ್ಟಿ, ಪದ್ಮನಾಭ ರೈ, ಶೈಲಜಾ ರಾಜೇಶ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment