ಬಂಟ್ವಾಳ, ಮಾರ್ಚ್ 04, 2025 (ಕರಾವಳಿ ಟೈಮ್ಸ್) : ತಾಲೂಕಿನ ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸುಮಾರು 105 ವರ್ಷಗಳ ಬಳಿಕ ಮಾರ್ಚ್ 5 ರಂದು ಬುಧವಾರ (ನಾಳೆ) ನಡೆಯುವ ಶತಚಂಡಿಕಾಯಾಗಕ್ಕೆ ದೇವಸ್ಥಾನದ ವಠಾರ ಸಕಲ ರೀತಿಯಲ್ಲೂ ಸಿದ್ದಗೊಂಡಿದ್ದು, ಈ ಹಿನ್ನಲೆಯಲ್ಲಿ ಶನಿವಾರ ವೈದಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.
ಪೊಳಲಿ ಶ್ರೀ ರಾಜರಾಜೇಶ್ವರೀ ಕ್ಷೇತ್ರದಲ್ಲಿ 105 ವರ್ಷಗಳ ಹಿಂದೆ ಶತಚಂಡಿಕಾಯಾಗ ನಡೆದಿರುವ ಬಗ್ಗೆ ದೇವಳದ ದಾಖಲೆ ಮತ್ತು ಇತಿಹಾಸ ತಿಳಿಸುತ್ತದೆ. ಬಳಿಕ ಅದೇ ಮಾದರಿಯಲ್ಲಿ ಲೋಕ ಕಲ್ಯಾಣಾರ್ಥ ಮತ್ತು ಸಾನಿಧ್ಯ ವೃದ್ಧಿಗಾಗಿ ಶತಚಂಡಿಕಾಯಾಗ ನಡೆಸಲಾಗುತ್ತಿದೆ. ಮಾರ್ಚ್ 5 ರಂದು ಬುಧವಾರ ಬೆಳಿಗ್ಗೆ 6 ಗಂಟೆಗೆ ಶತ ಚಂಡಿಕಾಯಾಗ ಆರಂಭವಾಗಲಿದೆ. ಮಧ್ಯಾಹ್ನ ಯಾಗದ ಪೂರ್ಣಾಹುತಿ ಬಳಿಕ ದೇವರಿಗೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ. ಮಾರ್ಚ್ 6 ರಂದು ಸೇವಾರೂಪದ ದೊಡ್ಡ ರಂಗಪೂಜೆ ಉತ್ಸವ ನಡೆಯಲಿದೆ.
ಈ ಹಿನ್ನಲೆಯಲ್ಲಿ ವೇದಮೂರ್ತಿ ಶ್ರೀಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಪ್ರಾರ್ಥನೆ, 108 ಕಾಯಿಯ ಗಣಪತಿ ಹೋಮ ನಡೆದು ಸಪ್ತಸತಿ ಪಾರಾಯಣ, ನವಾಕ್ಷರೀ ಜಪ ನಡೆಸಲಾಗಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದೇವಳದ ಆಡಳಿತ ಮೊಕ್ತೇಸರ ಡಾ ಮಂಜಯ್ಯ ಶೆಟ್ಟಿ ಸಹಿತ ಪ್ರಮುಖರು ಹಾಜರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ದೇವಳದ ಆಡಳಿತ ಮೊಕ್ತೇಸರ ಡಾ ಮಂಜಯ್ಯ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ಸಮಿತಿಗಳು ಸಕಲ ಸಿದ್ದತೆ ಮಾಡಿಕೊಂಡಿದೆ. 25 ಸಾವಿರಕ್ಕೂ ಮೀರಿದ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಶತಚಂಡಿಕಾಯಾಗದ ಪ್ರಯುಕ್ತ ಶನಿವಾರ ಸಂಜೆ ಅದ್ದೂರಿಯ ಹೊರೆಕಾಣಿಕೆ ಮೆರವಣಿಗೆಯು ನಡೆದಿದೆ. ವಿವಿಧೆಡೆಗಳಿಂದ ಬಂದ ಹೊರೆ ಕಾಣಿಕೆಗಳನ್ನು ಪೊಳಲಿ ದ್ವಾರದಿಂದ ಕ್ಷೇತ್ರದವರೆಗೆ ಮೆರವಣಿಗೆಯಲ್ಲಿ ಸಾಗಿಸಲಾಗಿದೆ.
0 comments:
Post a Comment