ಮಂಗಳೂರು, ಮಾರ್ಚ್ 09, 2025 (ಕರಾವಳಿ ಟೈಮ್ಸ್) : ತೀವ್ರ ಕುತೂಹಲ ಹಾಗೂ ಆತಂಕ ಸೃಷ್ಟಿಸಿದ್ದ ಫರಂಗಿಪೇಟೆಯ ಅಪ್ರಾಪ್ತ ವಿದ್ಯಾರ್ಥಿ ದಿಗಂತ್ ನಾಪತ್ತೆ ಪ್ರಕರಣದ ಅಸಲಿ ಕಾರಣವನ್ನು ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಭಾನುವಾರ ಮಾಧ್ಯಮಗಳಿಗೆ ವಿವರಿಸಿದರು.
ನಾಪತ್ತೆಯಾಗಿ 12 ದಿನಗಳ ಬಳಿಕ ಶುಕ್ರವಾರ ವಿದ್ಯಾರ್ಥಿ ದಿಗಂತ್ ಉಡುಪಿಯ ಡಿ-ಮಾರ್ಟ್ ಶಾಪಿನಲ್ಲಿ ಪತ್ತೆಯಾಗಿದ್ದಾನೆ. ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಗೆ ಹೆದರಿ ಬಾಲಕ ಪರಾರಿಯಾಗಿರುವುದಾಗಿ ಬಾಲಕನೇ ತಿಳಿಸಿರುವುದಾಗಿ ಎಸ್ಪಿ ತಿಳಿಸಿದ್ದಾರೆ.
ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆಯ ಹಾಲ್ ಟಿಕೆಟ್ ಪಡೆದುಕೊಂಡ ಬಳಿಕವೇ ದಿಗಂತ್ ಪರಾರಿಯಾಗುವ ಪ್ಲ್ಯಾನ್ ಮಾಡಿದ್ದಾನೆ. ಕಳೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಮನೆಯಲ್ಲಿ ಬೈದಿದ್ದರು. ಹೀಗಾಗಿ ಫೈನಲ್ ಪರೀಕ್ಷೆಯ ಭಯದಿಂದ ಪರಾರಿಯಾಗುವ ಯೋಜನೆ ರೂಪಿಸಿದ್ದಾನೆ. ತನ್ನ ತಪ್ಪನ್ನು ಮರೆಮಾಚಲು ತಾಯಿ ಬಳಿ ನನ್ನನ್ನು ಯಾರೋ ಹೊತ್ತೊಯ್ದಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ಬಾಲಕ ಪರಾರಿಯಾಗಲು ಮಾಡಿದ ರೂಟ್ ಮ್ಯಾಪ್ ಪ್ಲ್ಯಾನ್ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ತಿಳಿಸಿದ್ದಾನೆ.
ಫೆಬ್ರವರಿ 25 ರಂದು ನಾಪತ್ತೆಯಾಗಿದ್ದ ದಿಗಂತ್ ಅಂದೇ ಬಸ್ಸಿನಲ್ಲಿ ಮೈಸೂರಿಗೆ ತೆರಳಿದ್ದ. ಅಲ್ಲಿಂದ ಬೆಂಗಳೂರಿಗೆ ಬಸ್ಸಿನಲ್ಲೇ ಹೋಗಿ 2 ದಿನ ಬೆಂಗಳೂರಿನಲ್ಲಿ ಸುತ್ತಾಡಿದ್ದ. ಬಳಿಕ ಕೈಯಲ್ಲಿ ಹಣ ಖಾಲಿಯಾದಾಗ ಬೆಂಗಳೂರು ಹೊರವಲಯದ ರೆಸಾರ್ಟ್‍ನಲ್ಲಿ ಕೆಲಸಕ್ಕೆ ಸೇರಿದ್ದ. ರೆಸಾರ್ಟ್‍ನಲ್ಲಿ 3 ದಿನಗಳ ಕಾಲ ಕೆಲಸ ಮಾಡಿ ಸಂಬಳ ಪಡೆದು ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಸ್ಸಿನಲ್ಲಿ ಪ್ರಯಾಣ ಮಾಡಿ, ಶಿವಮೊಗ್ಗದಿಂದ ಮತ್ತೆ ಮೈಸೂರಿಗೆ ಬಸ್ಸಿನಲ್ಲಿ ತೆರಳಿದ್ದ. ಶುಕ್ರವಾರ ರಾತ್ರಿ ಮೈಸೂರಿನಿಂದ ಮುರುಡೇಶ್ವರದ ರೈಲಿನಲ್ಲಿ ತೆರಳಿದ್ದ. ರೈಲು ಫರಂಗಿಪೇಟೆ ಬಳಿ ಹೋಗುವಾಗ ತನ್ನ ಮನೆ ಸಮೀಪ ಪೆÇಲೀಸರು ಹುಡುಕಾಟ ನಡೆಸುತ್ತಿದ್ದುದನ್ನು ನೋಡಿದ್ದಾನೆ. ಬಳಿಕ ಉಡುಪಿಗೆ ಬರುತ್ತಿದ್ದಂತೆ ರೈಲಿನಿಂದ ಇಳಿದು ಡಿ-ಮಾರ್ಟ್‍ಗೆ ತೆರಳಿದ್ದ. ಡಿ-ಮಾರ್ಟ್ ಸಿಬ್ಬಂದಿ ಆತನನ್ನ ಗಮನಿಸಿ ಪತ್ತೆ ಹಚ್ಚಿ ಪೆÇಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಬಾಲಕನ ನಾಪತ್ತೆ ಬಳಿಕ ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ 7 ತಂಡ ತನಿಖೆ ನಡೆಸಿತ್ತು. 10 ದಿನಗಳ ಕಾಲ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ್ದೆವು. ಕಾಣೆಯಾಗಿದ್ದ ದಿಗಂತ್ ಶುಕ್ರವಾರ ಉಡುಪಿಯಲ್ಲಿ ಪತ್ತೆಯಾಗಿದ್ದ. ಆತನನ್ನು ವಿಚಾರಣೆ ನಡೆಸಿದಾಗ ಸಾಕಷ್ಟು ಮಾಹಿತಿ ಹೊರ ಬಂದಿದೆ. ಮಾರ್ಚ್ 3 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಇರುವ ಹಿನ್ನಲೆಯಲ್ಲಿ ಹೆದರಿರುವ ಬಗ್ಗೆ ಹೇಳಿದ್ದಾನೆ. ಪರೀಕ್ಷೆಗೆ ಸರಿಯಾದ ತಯಾರಿ ಮಾಡದೇ ಇರುವುದರಿಂದ ಹೆದರಿ ನಾಪತ್ತೆಯಾಗಿದ್ದ ಎಂದು ಎಸ್ಪಿ ತಿಳಿಸಿದರು.
ದಿಗಂತ್ ಮನೆಯಿಂದ ಹೋಗುವಾಗ 500 ರೂಪಾಯಿ ತೆಗೆದುಕೊಂಡು ಹೋಗಿದ್ದ. ಬಳಿಕ ಕೆಲವು ಕಡೆ ಟಿಕೆಟ್ ಕೊಡದೇ ಪ್ರಯಾಣ ಮಾಡಿದ್ದ. ಅವನ ಪಾದದಲ್ಲಿ ಗಾಯ ಆಗಿದ್ದು, ಅದೇ ರಕ್ತ ಚಪ್ಪಲಿಯಲ್ಲಿ ಅಂಟಿಕೊಂಡಿದೆ ಎಂದು ಹೇಳಿದ್ದಾನೆ. ಅವನನ್ನ ಯಾರೂ ಎತ್ತಿಕೊಂಡು ಹೋಗಿರಲಿಲ್ಲ. ಅವನೇ ಹೋಗಿದ್ದ. ಪ್ರಯಾಣದ ಸಮಯದಲ್ಲಿ ಅವನು ಯಾರನ್ನೂ ಸಂಪರ್ಕ ಮಾಡಿಲ್ಲ. ದಿಗಂತ್ ಕಲಿಕೆಯಲ್ಲಿ ಮುಂದಿದ್ದ, ಆದರೆ ಕೆಲ ದಿನಗಳಿಂದ ಸ್ವಲ್ಪ ಹಿನ್ನಡೆ ಅನುಭವಿಸಿದ್ದ. ಹೆಬಿಯಸ್ ಕಾರ್ಪಸ್ ದಾಖಲಾಗಿರುವ ಕಾರಣ ಹೈಕೋರ್ಟ್‍ಗೆ ಹಾಜರುಪಡಿಸುತ್ತೇವೆ. ಸದ್ಯ ದಿಗಂತ್ ಬೊಂದೇಲಿನ ಬಾಲ ಮಂದಿರದಲ್ಲಿದ್ದಾನೆ ಎಂದು ಎಸ್ಪಿ ವಿವರಿಸಿದರು.
0 comments:
Post a Comment