ಬಂಟ್ವಾಳ, ಮಾರ್ಚ್ 08, 2025 (ಕರಾವಳಿ ಟೈಮ್ಸ್) : ನಿಗೂಢವಾಗಿ ನಾಪತ್ತೆಯಾಗಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಮಂಗಳೂರು ಖಾಸಗಿ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ, ಪುದು ಗ್ರಾಮದ ಫರಂಗಿಪೇಟೆ, ಅಮೆಮಾರು ಸಮೀಪದ ಕಿದೆಬೆಟ್ಟು ನಿವಾಸಿ ದಿಗಂತ್ (17) ಕೊನೆಗೂ ಪೊಲೀಸರ ಶತಪ್ರಯತ್ನದ ಬಳಿಕ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಳೆದ ಫೆಬ್ರವರಿ 25 ರಂದು ಸಂಜೆ ಸ್ಥಳೀಯ ದೇವಸ್ಥಾನಕ್ಕೆಂದು ಹೇಳಿ ತೆರಳಿದವ ಬಳಿಕ ದೇವಸ್ಥಾನಕ್ಕೆ ಹೋಗದೆ, ಮನೆಗೂ ವಾಪಾಸಾಗದೆ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದ. ಆತನ ಪಾದರಕ್ಷೆ ಹಾಗೂ ಮೊಬೈಲ್ ಸ್ಥಳೀಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಇದರಿಂದ ಸಹಜವಾಗಿಯೇ ಆತಂಕ ಉಂಟಾಗಿತ್ತು. ಬಳಿಕ ಸ್ಥಳೀಯವಾಗಿ ಹಲವು ಬೆಳವಣಿಗೆಗಳು ನಡೆದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಪೊಲೀಸ್ ಕಾರ್ಯಾಚರಣೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ನಾಪತ್ತೆ ಪ್ರಕರಣ ರಾಜ್ಯ ವಿಧಾನಸಭೆಯಲ್ಲೂ ಸದ್ದು ಮಾಡಿದ್ದು, ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಈ ಬಗ್ಗೆ ಪ್ರಶ್ನಿಸಿ ಗಮನ ಸೆಳೆದಿದ್ದರು.
ಸ್ಪೀಕರ್ ಅವರ ಪ್ರಶ್ನೆ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸರಕಾರ ಹುಡುಗನ ಪತ್ತೆಗಾಗಿ 40ಕ್ಕೂ ಅಧಿಕ ಪೊಲೀಸರನ್ನೊಳಗೊಂಡ ಸುಮಾರು 7 ತಂಡಗಳನ್ನು ರಚಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಇದೀಗ ಸುಮಾರು 10 ದಿನದ ಬಳಿಕ ದಿಗಂತ್ ಪತ್ತೆಯಾಗಿದ್ದು, ಪೆÇಲಿಸರು ಆತನನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ.
0 comments:
Post a Comment