ಮಾಜಿ ಸಚಿವ, ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮೂಲತಃ ಬಾಕ್ರಬೈಲು ಮೂಲದ ಸುಬ್ಬಯ್ಯ ಶೆಟ್ಟಿ ನಿಧನ : ಸಮಕಾಲೀನ ಮಂತ್ರಿಯಾಗಿದ್ದ ಮೊಯಿಲಿ ಸಹಿತ ಹಲವು ಗಣ್ಯರ ಸಂತಾಪ - Karavali Times ಮಾಜಿ ಸಚಿವ, ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮೂಲತಃ ಬಾಕ್ರಬೈಲು ಮೂಲದ ಸುಬ್ಬಯ್ಯ ಶೆಟ್ಟಿ ನಿಧನ : ಸಮಕಾಲೀನ ಮಂತ್ರಿಯಾಗಿದ್ದ ಮೊಯಿಲಿ ಸಹಿತ ಹಲವು ಗಣ್ಯರ ಸಂತಾಪ - Karavali Times

728x90

10 March 2025

ಮಾಜಿ ಸಚಿವ, ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮೂಲತಃ ಬಾಕ್ರಬೈಲು ಮೂಲದ ಸುಬ್ಬಯ್ಯ ಶೆಟ್ಟಿ ನಿಧನ : ಸಮಕಾಲೀನ ಮಂತ್ರಿಯಾಗಿದ್ದ ಮೊಯಿಲಿ ಸಹಿತ ಹಲವು ಗಣ್ಯರ ಸಂತಾಪ

ಬಂಟ್ವಾಳ, ಮಾರ್ಚ್ 10, 2025 (ಕರಾವಳಿ ಟೈಮ್ಸ್) : ಮೂಲತಃ ಬಂಟ್ವಾಳ ತಾಲೂಕಿನ ಬಾಕ್ರಬೈಲು ನಿವಾಸಿ, ಮಾಜಿ ಸಚಿವ ಬಿ. ಸುಬ್ಬಯ್ಯ ಶೆಟ್ಟಿ (91) ಸೋಮವಾರ ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. 

ಸುಬ್ಬಯ್ಯ ಶೆಟ್ಟಿ ಅವರು 1972 ಮತ್ತು 1978ರ ಎರಡು ಅವಧಿಗಳಲ್ಲಿ ಸುರತ್ಕಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸಿದ್ದರು. ದೇವರಾಜ್ ಅರಸ್ ಅವರು ಮುಖ್ಯಮಂತ್ರಿಯಾಗಿದ್ದ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದರು, ಭೂಸುಧಾರಣೆ ಮತ್ತು ಶಿಕ್ಷಣ ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು.  ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಸುಬ್ಬಯ್ಯ ಶೆಟ್ಟಿ ಬಳಿಕ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದರು. 

ಆರಂಭದಲ್ಲಿ ಸಿಬಿಐ ಹುದ್ದೆಗೆ ನೇಮಕಗೊಂಡು ಕಾಶ್ಮೀರ ಮತ್ತು ಲಡಾಖ್‍ನಲ್ಲಿ ಸೇವೆ ಸಲ್ಲಿಸಿದ್ದ ಇವರು ಬಳಿಕ ರಾಜೀನಾಮೆ ನೀಡಿ ಕಾನೂನು ವೃತ್ತಿ ಆರಂಭಿಸಿದ್ದರು. ಆ ನಂತರ ರಾಜಕೀಯ ಪ್ರವೇಶಿಸಿದ ಸುಬ್ಬಯ್ಯ ಶೆಟ್ಟಿ ಸುಮಾರು ಹತ್ತು ವರ್ಷಗಳ ಕಾಲ ಶಾಸಕರಾಗಿ ಮತ್ತು ಸಚಿವರಾಗಿ ಸೇವೆ ಸಲ್ಲಿಸಿದ್ದರು. 

ಇವರು ತಮ್ಮ ವಿಶೇಷ ಕೊಡುಗೆಗಳಿಗಾಗಿ ಡಿ ದೇವರಾಜ್ ಅರಸು ಪ್ರಶಸ್ತಿ, ಶಾಂತವೇರಿ ಗೋಪಾಲ್ ಪ್ರಶಸ್ತಿ ಮತ್ತು ಡಾ ದಾ ರಾ ಬೇಂದ್ರೆ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ-ಗೌರವಗಳನ್ನು ಪಡೆದಿದ್ದರು. ಮೃತರು ಮಕ್ಕಳಾದ ಉಮಾ ಸವಣೂರು ಮತ್ತು ರೇಷ್ಮಾ ಸವಣೂರು ಅವರನ್ನು ಅಗಲಿದ್ದಾರೆ.

ಸಮಕಾಲೀನ ಮಂತ್ರಿಯಾಗಿದ್ದ ಮೊಯಿಲಿ ಸಹಿತ ಗಣ್ಯರಿಂದ ಸಂತಾಪ

ಮಾಜಿ ಸಚಿವ ಬಿ ಸುಬ್ಬಯ್ಯ ಶೆಟ್ಟಿ ಅವರ ನಿಧನಕ್ಕೆ ದೇವರಾಜ ಅರಸು ಅವರ ಮಂತ್ರಿಮಂಡಲದಲ್ಲಿ ಜೊತೆಯಾಗಿ ಮಂತ್ರಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಂ ವೀರಪ್ಪ ಮೊಯಿಲಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. 1972 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಜೊತೆಯಾಗಿ ಶಾಸಕರಾಗಿ ಚುನಾಯಿತರಾಗಿ ಬಳಿಕ ಮಂತ್ರಿಗಳಾಗಿ ದಿವಂಗತ ದೇವರಾಜ ಅರಸು ಅವರ ಕಾಲದ ಕ್ರಾಂತಿಕಾರಿ ಭೂಮಸೂದೆ ಕಾಯಿದೆಯನ್ನು ಸಿದ್ದಪಡಿಸುವ ಸಂದರ್ಭ ನಮ್ಮ ಜೊತೆ ಸುಬ್ಬಯ್ಯ ಶೆಟ್ಟಿ ಅವರು ಸಕ್ರಿಯವಾಗಿ ಭಾಗವಹಿಸಿದ್ದರು. ದಕ್ಷಿಣ ಕನ್ನಡ ಮತ್ತು ಕರ್ನಾಟಕದಲ್ಲಿ ಭೂಮಸೂದೆ ಕಾಯಿದೆ ಬರಲು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಭೂಮಸೂದೆ ಕಾಯಿದೆ ಅನುಷ್ಠಾನ ಮಾಡಿ ಲಕ್ಷಾಂತರ ಮಂದಿ ಗೇಣಿದಾರರು ತಮ್ಮ ಹಕ್ಕನ್ನು ಸ್ಥಿರಪಡಿಸಿಕೊಳ್ಳಲು ನಾವಿಬ್ಬರು ಜೊತೆಯಾಗಿ ದುಡಿದಿದ್ದೇವೆ. ಸೈದ್ದಾಂತಿಕವಾಗಿ ಸಾಮಾಜಿಕ ಚಿಂತನೆಯಲ್ಲಿ ಮತ್ತು ಕಾಂಗ್ರೆಸ್ ಪಕ್ಷದ ಸಿದ್ದಾಂತದಲ್ಲಿ ಬದ್ದವಾಗಿ ಕೆಲಸ ಮಾಡಿದ ಸುಬ್ಬಯ್ಯ ಶೆಟ್ಟಿ ಅವರ ಸೇವೆ ಅಪಾರವಾದದು ಮತ್ತು ಜನಜನಿತವಾಗಿದೆ. ನಮ್ಮಿಂದ ಅಗಲಿದ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದು ವೀರಪ್ಪ ಮೊಯಿಲಿ ಅವರು ತಮ್ಮ ಸಂತಾಪ ಸೂಚಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಕೇಂದ್ರದ ಮಾಜಿ ಸಚಿವ ಬಿ ಜನಾರ್ದನ ಪೂಜಾರಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್, ಮಾಜಿ ರಾಜ್ಯಸಭಾ ಸದಸ್ಯ ಬಿ ಇಬ್ರಾಹೀಂ, ಮಾಜಿ ಸಚಿವರಾದ ಬಿ ರಮಾನಾಥ ರೈ, ಅಭಯಚಂದ್ರ ಜೈನ್, ಗಂಗಾಧರ್ ಗೌಡ, ಶಾಸಕರಾದ ಅಶೋಕ್ ಕುಮಾರ್ ರೈ, ಐವನ್ ಡಿಸೋಜ, ಮಾಜಿ ಶಾಸಕರಾದ ವಿಜಯ ಕುಮಾರ್ ಶೆಟ್ಟಿ, ಎನ್ ಎಂ ಅಡ್ಯಂತಾಯ, ಮೊಹಮ್ಮದ್ ಮಸೂದ್, ಶಕುಂತಲಾ ಶೆಟ್ಟಿ, ಜೆ ಆರ್ ಲೋಬೊ, ಎಐಸಿಸಿ ಕಾರ್ಯದರ್ಶಿ ಪಿ ವಿ ಮೋಹನ್ ಜಿ ಎ ಬಾವ, ಪ್ರಮುಖರಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ ಎಚ್ ಖಾದರ್, ಶಶಿಧರ್ ಹೆಗ್ಡೆ, ಹಾಜಿ ಯು ಕೆ ಮೋನು ಕಣಚೂರು ಸಹಿತ ಹಲವು ಮಂದಿ ಗಣ್ಯರು ಸುಬ್ಬಯ್ಯ ಶೆಟ್ಟಿ ಅವರ ಅಗಲಿಕೆಗೆ ತೀವ್ರ ಸಂಪಾತ ಸೂಚಿಸಿದ್ದಾರೆ.

  • Blogger Comments
  • Facebook Comments

0 comments:

Post a Comment

Item Reviewed: ಮಾಜಿ ಸಚಿವ, ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಮೂಲತಃ ಬಾಕ್ರಬೈಲು ಮೂಲದ ಸುಬ್ಬಯ್ಯ ಶೆಟ್ಟಿ ನಿಧನ : ಸಮಕಾಲೀನ ಮಂತ್ರಿಯಾಗಿದ್ದ ಮೊಯಿಲಿ ಸಹಿತ ಹಲವು ಗಣ್ಯರ ಸಂತಾಪ Rating: 5 Reviewed By: lk
Scroll to Top