ಬಂಟ್ವಾಳ, ಮಾರ್ಚ್ 28, 2025 (ಕರಾವಳಿ ಟೈಮ್ಸ್) : ತಾಲೂಕಿನ ಎರಡು ಧಾರ್ಮಿಕ ಕ್ಷೇತ್ರಗಳಾದ ಅಜಿಲಮೊಗರು ಹಝ್ರತ್ ಬಾಬಾ ಫಕ್ರುದ್ದೀನ್ ಜುಮಾ ಮಸೀದಿ ಹಾಗೂ ದರ್ಗಾ ಶರೀಫ್ ಮತ್ತು ಮಸೀದಿಯ ಮುಂಭಾಗದ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿರುವ ಕಡೇಶ್ವಾಲ್ಯ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಮಾಜಿ ಸಚಿವ ಬಿ ರಮಾನಾಥ ರೈ ಅವರ ಕನಸಿಕ ಯೋಜನೆಯಾಗಿರುವ “ಸೌಹಾರ್ದ ಸೇತುವೆ” ಕಾಮಗಾರಿ ಏಳು ವರ್ಷಗಳ ಹಿಂದೆ ಆರಂಭಗೊಂಡಿದ್ದು, ಬಳಿಕ ರೈ ಅವರ ಸೋಲಿನಿಂದಾಗಿ ಕುಂಟುತ್ತಾ ಸಾಗುತ್ತಿರುವ ಸೇತುವೆಯ ಕಾಮಗಾರಿಗೆ ಮತ್ತೆ ವೇಗ ನೀಡುವ ನಿಟ್ಟಿನಲ್ಲಿ ರಮಾನಾಥ ರೈ ಅವರ ಸೂಚನೆ ಮೇರೆಗೆ ಗುರುವಾರ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆ ಆರ್ ಡಿ ಸಿ ಎಲ್ ಅಧಿಕಾರಿಗಳ ತಂಡದ ಜೊತೆ ಭೇಟಿ ನೀಡಿದ ಡೀಸಿ ಮುಹಿಲನ್ ಅವರು ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ಸೇತುವೆ ಕಾಮಗಾರಿಯ ಬೆಳವಣಿಗೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ವತಃ ಸ್ಥಳದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ರಮಾನಾಥ ರೈ ಅವರು ಕಾಮಗಾರಿ ಶೀಘ್ರ ಮುಗಿಸಿ ಸೇತುವೆ ಜನರಿಗೆ ಉಪಯೋಗಕ್ಕೆ ದೊರೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಡೀಸಿ ಅವರಿಗೆ ಸೂಕ್ತ ಸಲಹೆ ನೀಡಿದರು.
ಈ ವೇಳೆ ಶಂಭೂರು ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಹೆಚ್ಚಿರುವುದರಿಂದ ಪಿಲ್ಲರ್ ಕಾಮಗಾರಿ ನಡೆಸಲು ಅನಾನುಕೂಲವಾಗಿ ಎಂಬ ಅಭಿಪ್ರಾಯಕ್ಕೆ ಬೇಸಿಗೆ ಕಳೆದು ತುಂಬೆ ಡ್ಯಾಮಿನಲ್ಲಿ ನೀರು ಕಡಿಮೆಯಾದರೆ ನೀರನ್ನು ಕೆಳಕ್ಕೆ ಹರಿಸಿ ಇಲ್ಲಿ ನೀರಿನ ಸಂಗ್ರಹ ಕಡಿಮೆಯಾದಾಗ ಕಾಮಗಾರಿ ನಡೆಸಬಹುದು. ಕಾಮಗಾರಿಗೆ ಹೆಚ್ಚುವರಿ ಮೊತ್ತದ ಅವಶ್ಯಕತೆ ಬಂದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅದನ್ನು ಮುಂದುವರಿಸುವ ಬಗ್ಗೆ ಅಭಿಪ್ರಾಯಕ್ಕೆ ಬರಲಾಯಿತು.
ಈ ಸಂದರ್ಭ ಬುಡಾ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ಎಸಿ ಹರ್ಷವರ್ಧನ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್, ಕೆ ಆರ್ ಡಿ ಸಿ ಎಲ್ ಇಲಾಖಾ ಇಇ ರಘು, ಎಇ ಭರತ್, ಕುಡಿಯುವ ನೀರು ವಿಭಾಗದ ಎಇಇ ನಟೇಶ್, ಎಇ ಜಗದೀಶ್, ಬಂಟ್ವಾಳ ತಾ ಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಮಣಿ ನಾಲ್ಕೂರು ಗ್ರಾ ಪಂ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶಿವಪ್ಪ ಪೂಜಾರಿ, ಸದಸ್ಯೆ ಕಾಂಚಲಾಕ್ಷಿ, ಮಾಜಿ ಸದಸ್ಯ ಆದಂ ಕುಂಞÂ, ಕಡೇಶ್ವಾಲ್ಯ ಗ್ರಾ ಪಂ ಸದಸ್ಯ ಹರಿಶ್ಚಂದ್ರ ಕಾಡಬೆಟ್ಟು, ಸಂಜೀವ ಪೂಜಾರಿ ಕಟ್ಟಡದೆ, ಚೆರಿಯೆ ಮೋನು, ನವೀನ್ ಕೊಡಂಗೆ, ಬಾಲಕೃಷ್ಣ ಕೊಟ್ಟುಂಜ ಮೊದಲಾದವರು ಜೊತೆಗಿದ್ದರು.
0 comments:
Post a Comment