ಬಂಟ್ವಾಳ, ಫೆಬ್ರವರಿ 03, 2025 (ಕರಾವಳಿ ಟೈಮ್ಸ್) : ಕಳ್ಳಿಗೆ ಗ್ರಾಮದ ತೊಡಂಬಿಲ ಅಂಗನವಾಡಿ ಕೇಂದ್ರವೊಂದು ಇದೀಗ ಗೊಂದಲದ ಪರಿಸ್ಥಿತಿಯಲ್ಲಿದ್ದು, ಇಲಾಖೆಗೂ ಸ್ಥಳೀಯರಿಗೂ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಕಾರಣ ಸ್ಥಳೀಯ ಖಾಸಗಿ ವ್ಯಕ್ತಿಯೊಬ್ಬರು ದಾನವಾಗಿ ನೀಡಿರುವ ಜಮೀನಿನಲ್ಲಿ ನಿರ್ಮಾಣವಾಗಿರುವ ಇಲ್ಲಿನ ಅಂಗನವಾಡಿ ಕೇಂದ್ರ ಬಳಿಕ ದಾನ ಮಾಡಿದ ವ್ಯಕ್ತಿಗಳೇ ನಿವೇಶನ ಮಾರಾಟ ಮಾಡಿದಾಗ ಅಂಗನವಾಡಿ ಕಟ್ಟಡ ಇರುವ ಜಮೀನು ಖಾಸಗಿ ವ್ಯಕ್ತಿಯ ಪಾಲಾಗಿದೆ. ಇದೀಗ ಅಂಗನವಾಡಿಗೆ ದಾನವಾಗಿ ನೀಡಲಾಗಿರುವ ಜಮೀನಿನ ದಾಖಲೆ ಬೇರೆ ಕಡೆ ಇದ್ದು, ಕಟ್ಟಡ ಇರುವ ಜಾಗವೇ ಬೇರೆಯಾಗಿದ್ದು ತ್ರಿಶಂಕು ಸ್ಥಿತಿ ಕಂಡು ಬರುತ್ತಿದೆ.
ತೊಡಂಬಿಲ ಊರಿನ ಪುಟಾಣಿಗಳಿಗೆ ಅಂಗನವಾಡಿ ಕೇಂದ್ರ ಬೇಕು ಎಂಬ ನಿಟ್ಟಿನಲ್ಲಿ ಸುಮಾರು ಮೂರು ದಶಕಗಳ ಹಿಂದೆ ಸ್ಥಳೀಯ ನಿವಾಸಿ ದಿವಂಗತ ಸುಂದರ ರೈ ಎಂಬವರು ಸುಮಾರು 5 ಸೆಂಟ್ಸ್ ಸ್ಥಳವನ್ನು ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಹೆಸರಿಗೆ ದಾನವಾಗಿ ನೀಡಿದ್ದರು. ಆದರೆ ಕೆಲವು ವರ್ಷಗಳ ನಂತರ ತಮ್ಮಲ್ಲಿರುವ ಇತರ ಜಾಗವನ್ನು ಖಾಸಗಿಯಾಗಿ ಮಾರಾಟ ಮಾಡುವಾಗ ಕೈಬರಹದ ಪಹಣಿ ಪತ್ರ ನೀಡುತ್ತಿರುವ ಸಂದರ್ಭ ಅವರ ಇತರ ಜಾಗದ ದಾಖಲೆಯೊಂದಿಗೆ ಅಂಗನವಾಡಿ ಕೇಂದ್ರ ಇರುವ ಸ್ಥಳದ ದಾಖಲೆಯು ಒಳಗೊಂಡಿದೆ. ಇದೀಗ ಅದು ಖಾಸಗಿ ವ್ಯಕ್ತಿಯ ಪಾಲಾಗಿದೆ. ನಂತರ ಅಂಗನವಾಡಿ ಕೇಂದ್ರಕ್ಕೆ ದಾನವಾಗಿ ನೀಡಿರುವ ನಿವೇಶನದ ದಾಖಲೆಯು ಪಚ್ಚಿನಡ್ಕ ಸಮೀಪ ಸರ್ವೆ ನಂಬರ್ 12/2, ಖಾತೆ ಸಂಖ್ಯೆ 384, ಎಂಟಿಎನ್ 5/9495, 27-6-1994ರಲ್ಲಿ ಬರುತ್ತಿದೆ. ಸರಕಾರಿ ದಾಖಲೆಯಲ್ಲಿ ಬಂಟ್ವಾಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಹೆಸರಿನಲ್ಲಿ ಆರ್‍ಟಿಸಿಯಾದರೂ ಬಂಟ್ವಾಳ ಶಿಶು ಅಭಿವೃದ್ಧಿ ಇಲಾಖೆಗೆ ಸರಿಯಾದ ನಿವೇಶನ ಸಿಗದಿರುವುದರಿಂದಾಗಿ ಗೊಂದಲ ಉಂಟಾಗಿದೆ.
ಇದಿಷ್ಟು ಜಮೀನು ಸಮಸ್ಯೆಯಾದರೆ, ಇನ್ನು ಅಂಗನವಾಡಿ ಕಟ್ಟಡದ ವಿಷಯಕ್ಕೆ ಬರುವುದಾದರೆ, ಸದ್ಯ ಖಾಸಗಿ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ತೊಡಂಬಿಲ ಅಂಗನವಾಡಿ ಕೇಂದ್ರದ ಹಿಂಭಾಗ ಬೃಹತ್ ಗಾತ್ರದ ಮರಗಳಿಂದ ಕೂಡಿರುತ್ತದೆ. ಅಂಗನವಾಡಿ ಕೇಂದ್ರ ಎರಡೂ ಬದಿಯ ಭಾಗದಲ್ಲಿ ಕಾಡಿನಂತಾಗಿದೆ. ಅಷ್ಟೇ ಅಲ್ಲದೇ ಅಂಗನವಾಡಿ ಕೇಂದ್ರದ ಸನಿಹದಲ್ಲೇ ಬೃಹತ್ ಆಲದ ಮರ ಆವರಿಸಿದೆ. ಇದರಿಂದಾಗಿ ಅಂಗನವಾಡಿ ಕಟ್ಟಡದ ಹಿಂದುಗಡೆ ಬಿರುಕು ಬಿಟ್ಟಿದೆ. ಅಂಗನವಾಡಿಯ ಎದುರುಗಡೆ ಕೆಲವೇ ದೂರದಲ್ಲಿ 12 ಅಡಿ ಎತ್ತರದಲ್ಲಿ ಬಿ ಸಿ ರೋಡು-ಪೆÇಳಲಿ ಮುಖ್ಯ ರಸ್ತೆ ಹಾದು ಹೋಗಿರುತ್ತದೆ. ರಸ್ತೆಯ ಮೇಲ್ಭಾಗದಲ್ಲಿ ನೋಡುವಾಗ ಈ ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಮಾತ್ರ ಕಾಣುತ್ತಿದ್ದು ಸುತ್ತಲೂ ಕಾಡಿನಂತೆ ಮರಗಳ ಮಧ್ಯೆ ಕೂಡಿದೆ.
ಮುಖ್ಯ ರಸ್ತೆಯು ಅಂಗನವಾಡಿ ಕೇಂದ್ರದ ಬಳಿಯೇ ಇಳಿಜಾರಾಗಿದ್ದು ಬೃಹತ್ ತಿರುವನ್ನು ಒಳಗೊಂಡಿದೆ. ತಿರುವು ಬಳಿಯಲ್ಲೇ ಅಂಗನವಾಡಿ ಕೇಂದ್ರಕ್ಕೆ ತೆರಳುವ ದಾರಿ ಇದ್ದು, ಯಾವುದೇ ಕಂಪೌಂಡ್ ಅಥವಾ ಗೇಟ್ ಇರುವುದಿಲ್ಲ. ರಸ್ತೆಯ ಬದಿಯಲ್ಲಿ ಅಂಗನವಾಡಿ ಕೇಂದ್ರ ಇರುವ ಬಗ್ಗೆ ಯಾವುದೇ ಮಾರ್ಗಸೂಚಿಯೂ ಅಳವಡಿಸಿಲ್ಲ. ಬಿ ಸಿ ರೋಡು-ಪೆÇಳಿಲಿ ರಸ್ತೆಯಲ್ಲಿ ಮೂವತ್ತು ವರ್ಷಗಳ ಹಿಂದೆ ರಸ್ತೆಯು ಅಗಲ ಇಲ್ಲದೇ ಇದ್ದು ವಾಹನ ಸಂಚಾರವೂ ಕಡಿಮೆ ಇತ್ತು. ಆ ಕಾಲದಲ್ಲಿ ಈ ನಿವೇಶನದಲ್ಲಿರುವ ಅಂಗನವಾಡಿಗೆ ಸಮಸ್ಯೆ ಇರಲಿಲ್ಲ. ಆದರೆ ಈಗ ರಸ್ತೆ ಅಗಲೀಕರಣವಾಗಿ ನಿರಂತರವಾಗಿ ವಾಹನ ಸಂಚಾರ ಇದೆ. ಮುಖ್ಯ ರಸ್ತೆಯ ತಿರುವು ಬಳಿ ಆಳವಾದ ತಗ್ಗು ಪ್ರದೇಶದಲ್ಲಿ ದಟ್ಟ ಮರಗಳ ಮಧ್ಯೆ ಅಂಗನವಾಡಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಭಾರೀ ಅಪಾಯವನ್ನು ಆಹ್ವಾನಿಸುತ್ತಿದೆ. ಇಲ್ಲಿನ ಅಂಗನವಾಡಿ ಕೇಂದ್ರದ ಸುಸ್ಥಿತಿಗೆ ಸಂಬಂಧಪಟ್ಟವರು ಗಮನ ಹರಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment