ಮೇರೆ ಮೀರಿದ ಕುಡಿಯುವ ನೀರು ಸಹಿತ ಮೂಲಭೂತ ಸಮಸ್ಯೆಗಳು : ಪುರಸಭಾ ಕೌನ್ಸಿಲರುಗಳ ವಿರುದ್ದ ಸಮರ ಸಾರಿದ ರೆಂಗೇಲು, ಕೌಡೇಲು ನಾಗರಿಕರು - Karavali Times ಮೇರೆ ಮೀರಿದ ಕುಡಿಯುವ ನೀರು ಸಹಿತ ಮೂಲಭೂತ ಸಮಸ್ಯೆಗಳು : ಪುರಸಭಾ ಕೌನ್ಸಿಲರುಗಳ ವಿರುದ್ದ ಸಮರ ಸಾರಿದ ರೆಂಗೇಲು, ಕೌಡೇಲು ನಾಗರಿಕರು - Karavali Times

728x90

25 February 2025

ಮೇರೆ ಮೀರಿದ ಕುಡಿಯುವ ನೀರು ಸಹಿತ ಮೂಲಭೂತ ಸಮಸ್ಯೆಗಳು : ಪುರಸಭಾ ಕೌನ್ಸಿಲರುಗಳ ವಿರುದ್ದ ಸಮರ ಸಾರಿದ ರೆಂಗೇಲು, ಕೌಡೇಲು ನಾಗರಿಕರು

ಪರಿಸರದ ನೀರಿನ ಟ್ಯಾಂಕ್ ಫೈಲ್ ಚಿತ್ರಗಳು

ಬಂಟ್ವಾಳ, ಫೆಬ್ರವರಿ 25, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ಪೇಟೆ ಸಮೀಪದ ರೆಂಗೇಲು ಹಾಗೂ ಕೌಡೇಲು ಪ್ರದೇಶಗಳ ಹಲವು ವರ್ಷಗಳ ನಿರಂತರ ಕುಡಿಯುವ ನೀರು ಸಹಿತ ಮೂಲಭೂತ ಸಮಸ್ಯೆಗಳ ಬಗ್ಗೆ ಜನರ ಅಹವಾಲುಗಳಿಗೆ ಕ್ಯಾರೇ ಅನ್ನದ ಸ್ಥಳೀಯ ಕೌನ್ಸಿಲರುಗಳ ವಿರುದ್ದ ಇದೀಗ ನಾಗರಿಕರು ಸಮರವನ್ನೇ ಸಾರಿದ್ದಾರೆ. 

ಈ ಪ್ರದೇಶದಲ್ಲಿ ಪ್ರತಿ ವರ್ಷವೂ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿದ್ದು, ಪರಿಹಾರದ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳು ಇಲ್ಲಿನ ಚುನಾಯಿತ ಜನಪ್ರತಿನಿಧಿಗಳಿಂದಾಗಲೀ, ಚುನಾವಣಾ ಸಂದರ್ಭ ವಿವಿಧ ಭರವಸೆ ನೀಡಿ ಬರುವ ಜವಾಬ್ದಾರಿಯುತ ರಾಜಕೀಯ ಪಕ್ಷಗಳ ನಾಯಕರಿಂದಾಗಲೀ, ಪುರಸಭಾಧಿಕಾರಿಗಳಿಂದಾಗಲೀ, ಬೇಸಿಗೆಯಲ್ಲಿ ವಿಶೇಷವಾಗಿ ಕುಡಿಯುವ ನೀರನ್ನು ಜನರಿಗೆ ಒದಗಿಸಿಕೊಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾದ ತಾಲೂಕಾಡಳಿತ, ಜಿಲ್ಲಾಡಳಿತಗಳಿಂದ ನಡೆಯುತ್ತಿಲ್ಲ ಎಂದು ಆರೋಪಿಸುತ್ತಲೇ ಬಂದಿರುವ ಇಲ್ಲಿನ ನಾಗರಿಕರು ಇದೀಗ ತೀವ್ರ ಆಕ್ರೋಶಭರಿತರಾಗಿದ್ದು, ಪುರಸಭಾ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರುಗಳ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಲು ಸಿದ್ದತೆ ನಡೆಸುತ್ತಿದ್ದಾರೆ. 

ಈ ಪ್ರದೇಶ ಗ್ರಾಮೀಣ ಪ್ರದೇಶವಾಗಿರದೆ, ಬಂಟ್ವಾಳ ಪುರಸಭೆಯ ವ್ಯಾಪ್ತಿಗೆ ಬರುವ ಪಟ್ಟಣ ಪ್ರದೇಶವಾಗಿದೆ. ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಮೆಲ್ಕಾರ್ ಜಂಕ್ಷನ್ನಿನ ಅನತಿ ದೂರದಲ್ಲಿರುವ ಈ ಪ್ರದೇಶದ ಜನರಿಗೆ ಮೂಲಭೂತ ಸೌಲಭ್ಯವಾಗಿರುವ ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯನ್ನೇ ಒದಗಿಸಿಕೊಡಲು ಸಾಧ್ಯವಾಗದಿರುವುದೇ ಇಲ್ಲಿನ ಪುರಸಭೆಗೆ ಇಲ್ಲಿನ ಜನರಿಂದಲೇ ಆಯ್ಕೆಯಾದ ಜನಪ್ರತಿನಿಧಿಗಳು ಹಾಗೂ ಪುರಸಭಾಧಿಕಾರಿಗಳ ಜವಾಬ್ದಾರಿಯನ್ನೇ ಪ್ರಶ್ನಿಸುವಂತಾಗಿದೆ. ಇಲ್ಲಿನ ನೀರಿನ ಸಮಸ್ಯೆ ಶಾಶ್ವತವಾಗಿದ್ದು, ಬೀದಿ ದೀಪಗಳೂ ಇಲ್ಲದೆ ಪರಿಸರ ಕತ್ತಲ ಕೂಪವಾಗಿದ್ದು, ಶಾಲಾ-ಕಾಲೇಜು, ಮದ್ರಸ ವಿದ್ಯಾರ್ಥಿಗಳ ಸಹಿತ ಸ್ಥಳೀಯ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಪುರಸಭಾ ಕೌನ್ಸಿಲರುಗಳು, ಪುರಸಭಾಧ್ಯಕ್ಷರ ಸಹಿತ ಪುರಸಭಾಧಿಕಾರಿಗಳಿಗೆ ಮನವಿ ನೀಡಿ ಹಲವು ಸಮಸ್ಯೆಗಳೇ ಕಳೆದರೂ ಇನ್ನೂ ಕೂಡಾ ಕನಿಷ್ಠ ಬೀದಿ ದೀಪವನ್ನೂ ಆಳವಡಿಸಲು ಸಾಧ್ಯವಾಗದೆ ಇರುವುದೇ ಯಕ್ಷ ಪ್ರಶ್ನೆಯಾಗಿದೆ. 

ಈ ಭಾಗದಲ್ಲಿ ಪುರಸಭಾ ಆಡಳಿತ ಪಕ್ಷದ ಮೂರು ಮಂದಿ ಕೌನ್ಸಿಲರುಗಳಿದ್ದರೂ ಊಟಕ್ಕಿಲ್ಲದ ಉಪ್ಪಿನ ಕಾಯಿಯಂತಾಗಿದೆ ಎನ್ನುವ ಸ್ಥಳೀಯರು ಇಲ್ಲಿನ ಸದಸ್ಯರುಗಳಲ್ಲಿ ಸಮಸ್ಯೆಗಳ ಗಂಭೀರತೆ ಬಗ್ಗೆ ಗಮನಕ್ಕೆ ತಂದರೆ ತಮಗೂ ಇಲ್ಲಿನ ಜನರಿಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಪುರಸಭೆಯ ಆಡಳಿತ ಪಕ್ಷಕ್ಕೆ ಪರವಾಗಿರುವ ಮತದಾರರೇ ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಚುನಾವಣಾ ಸಂದರ್ಭ ಮತ ಭಿಕ್ಷೆ ಬೇಡಲು ಬರುವ ಕಾಂಗ್ರೆಸ್ ಪಕ್ಷದ ನಾಯಕರಾಗಲೀ, ಜಿಲ್ಲಾ ಉಸ್ತುವಾರಿ ಸಚಿವರಾಗಲೀ, ಮಾಜಿ ಸಚಿವರಾಗಲೀ ಇಲ್ಲಿನ ಜನರ ಸಮಸ್ಯೆ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕಲ್ಪಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಲ್ಲದೆ ಆಡಳಿತ ಪಕ್ಷದ ಕೌನ್ಸಿಲರುಗಳನ್ನು ಮುಂದಿನ ಚುನಾವಣೆಯಲ್ಲಿ ಪೂರ್ಣವಾಗಿ ಸೋಲಿಸಿ ಇತರ ಪಕ್ಷಗಳ ಪ್ರತಿನಿಧಿಗಳನ್ನು ಚುನಾಯಿಸಿ ಪ್ರತಿರೋಧ ಒಡ್ಡುವುದಂತೂ ಗ್ಯಾರಂಟಿ ಎಂದು ಸವಾಲೆಸೆದಿದ್ದಾರೆ. 

ಈ ಹಿಂದೆಯೂ ಈ ಪರಿಸರದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ ಸಂದರ್ಭ ಸ್ಥಳೀಯರು ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದರು. ಈ ಸಂದರ್ಭ ಎಚ್ಚೆತ್ತ ಪುರಸಭಾಧಿಕಾರಿಗಳು ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಒದಗಿಸಿ ಸಮಾಧಾನಪಡಿಸಿದ್ದನ್ನು ಈ ಸಂದರ್ಭ ಸ್ಮರಿಸಿಕೊಳ್ಳಬಹುದು. 

ಇದೀಗ ಮತ್ತೆ ಬಿರು ಬೇಸಗೆ ಸಮೀಪಿಸುತ್ತಿದ್ದು, ಕುಡಿಯುವ ನೀರಿನ ಅಭಾವ ತೀವ್ರವಾಗಿದೆ. ಈ ಮಧ್ಯೆ ನಲುಗಿರುವ ರೆಂಗೇಲು, ಕೌಡೇಲು ಪ್ರದೇಶದ ಜನ ಸಮಸ್ಯೆಗೆ ತಕ್ಷಣ ತುರ್ತಾಗಿ ಪರಿಹಾರ ಒದಗಿಸುವಂತೆ ಸ್ಥಳೀಯರು ಅಗ್ರಹಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಮೇರೆ ಮೀರಿದ ಕುಡಿಯುವ ನೀರು ಸಹಿತ ಮೂಲಭೂತ ಸಮಸ್ಯೆಗಳು : ಪುರಸಭಾ ಕೌನ್ಸಿಲರುಗಳ ವಿರುದ್ದ ಸಮರ ಸಾರಿದ ರೆಂಗೇಲು, ಕೌಡೇಲು ನಾಗರಿಕರು Rating: 5 Reviewed By: karavali Times
Scroll to Top