ಬಂಟ್ವಾಳ, ಫೆಬ್ರವರಿ 03, 2025 (ಕರಾವಳಿ ಟೈಮ್ಸ್) : ಬೆಂಗಳೂರಿನಿಂದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಬ್ಯಾಗಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ಕಳವುಗೈದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಬೆಂಗಳೂರು, ಯಲಹಂಕ ನಿವಾಸಿ ರಾಜಗೋಪಾಲ್ ಕಾರಂತ (68) ಅವರು ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದು, ಇವರ ಪತ್ನಿಯ ಮನೆ ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮುಲ್ಕಾಜೆ ಮಾಡ ಎಂಬಲ್ಲಿ ಆಗಿದ್ದು, ಇವರು ತನ್ನ ಪತ್ನಿಯ ಊರಿನಲ್ಲಿ ನಡೆಯುವ ಖಾಸಗಿ ಕಾರ್ಯಕ್ರಮಕ್ಕೆ ತೆರಳಲು ಮನೆಯಿಂದ ಚಿನ್ನವನ್ನು ಬಾಕ್ಸನಲ್ಲಿ ಇಟ್ಟುಕೊಂಡು ಅದರ ಜೊತೆಯಲ್ಲಿ 3 ಸಾವಿರ ರೂಪಾಯಿ ನಗದು ಹಣವನ್ನು ತಮ್ಮ ಲಗೇಜು ಬ್ಯಾಗ್ ನಲ್ಲಿರಿಸಿ ತನ್ನ ಪತ್ನಿ ಮತ್ತು ಅಳಿಯನೊಂದಿಗೆ, ಫೆಬ್ರವರಿ 1 ರಂದು ರಾತ್ರಿ ಬೆಂಗಳೂರು ಮೆಜೆಸ್ಟಿಕ್ ನಿಂದ ಕೆ ಎಸ್ ಆರ್ ಟಿ ಸಿ ಬಸ್ಸಿನಲ್ಲಿ ಹೊರಟಿರುತ್ತಾರೆ. ಬರುವ ದಾರಿಯಲ್ಲಿ ಕುಣಿಗಲ್ ಬಳಿ ಬಸ್ ನಿಲ್ಲಿಸಿದಾಗ ಇವರುಗಳು ಚಿನ್ನಾಭರಣ ಹಾಗೂ ನಗದು ಹಣವಿದ್ದ ಬ್ಯಾಗುಗಳನ್ನು ಬಸ್ಸಿನಲ್ಲಿಯೇ ಇಟ್ಟು ಶೌಚಾಲಯಕ್ಕೆ ಹೋಗಿ ಬಂದಿರುತ್ತಾರೆ. ಮರುದಿನ ಅಂದರೆ ಫೆಬ್ರವರಿ 2 ರಂದು ಮುಂಜಾನೆ ಬಸ್ ವಗ್ಗ-ಕಾರಿಂಜ ಕ್ರಾಸ್ ತಲುಪಿದಾಗ, ಅಲ್ಲಿ ಇವರು ಬಸ್ಸಿನಿಂದ ಇಳಿದು ಅಲ್ಲಿಯೇ ಬಸ್ ನಿಲ್ದಾಣದ ಪಕ್ಕದಲ್ಲಿ ಬ್ಯಾಗನ್ನು ತೆರೆದು ನೋಡಿದಾಗ ಸುಮಾರು 10 ಲಕ್ಷ 8 ಸಾವಿರ ರೂಪಾಯಿ ಮೌಲ್ಯದ ಒಟ್ಟು 144 ಗ್ರಾಂ ಚಿನ್ನ ಹಾಗೂ 3 ಸಾವಿರ ರೂಪಾಯಿ ನಗದು ಹಣ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಯಾರೋ ಕಳ್ಳರು ಬಸ್ಸಿನಲ್ಲಿ ಅಥವಾ ಕುಣಿಗಲ್ ಹೋಟೆಲ್ ಬಳಿ ಇದನ್ನು ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
0 comments:
Post a Comment