ಮಂಗಳೂರು, ಫೆಬ್ರವರಿ 08, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಫಲಿತಾಂಶ ಶುಕ್ರವಾರ ಸಂಜೆ ಘೋಷಣೆಯಾಗಿದ್ದು, ಬಂಟ್ವಾಳ ಮೂಲದ ಅಭ್ಯರ್ಥಿ ಇಬ್ರಾಹಿಂ ನವಾಝ್ ಬಡಕಬೈಲು ಅವರು 10,942 ಮತಗಳನ್ನು ಗಳಿಸಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಬಡಕಬೈಲ್ ನಿವಾಸಿಯಾಗಿರುವ ಇಬ್ರಾಹೀಂ ನವಾಝ್ ಈ ಹಿಂದೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ, ಕರಿಯಂಗಳ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತು ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸಾಮಾಜಿಕ ಸಂಘ-ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಅವರು ಬಂಟ್ವಾಳ ಹ್ಯೂಮನ್ ವೆಲ್ಫೇರ್ ಫೌಂಡೇಶನ್ ಸ್ಥಾಪಕಾಧ್ಯಕ್ಷರಾಗಿ, ಆಸರೆ ಸೇವಾ ಫೌಂಡೇಶನ್ ಕಾರ್ಯದರ್ಶಿ, ನವೋದಯ ಅಟೋ-ರಿಕ್ಷಾ ಚಾಲಕ-ಮಾಲಕರ ಸಂಘ ಗೌರವಾಧ್ಯಕ್ಷರಾಗಿ, ಬಂಟ್ವಾಳ ಸಮೃದ್ಧಿ ಚಾರಿಟೇಬಲ್ ಟ್ರಸ್ಟ್ ಸದಸ್ಯರಾಗಿ, ತೆಂಗು ಬೆಳೆಗಾರರ ಉತ್ಪಾದಕರ ಸಂಘದ ಕಾರ್ಯದರ್ಶಿ ಸಹಿತ ವಿವಿಧ ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯ ಘಟಕ, ಜಿಲ್ಲಾ ಘಟಕ, ಬ್ಲಾಕ್ ಘಟಕಗಳಿಗೆ ವಿವಿಧ ಹುದ್ದೆಗಳಿಗೆ ಏಕ ಕಾಲಕ್ಕೆ 2024ರ ಆಗಸ್ಟ್ ತಿಂಗಳಿನಲ್ಲಿ ಮತದಾನ ನಡೆದಿತ್ತು. ದ ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಎಂಟು ಮಂದಿ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು.
0 comments:
Post a Comment