ಬಂಟ್ವಾಳ, ಫೆಬ್ರವರಿ 23, 2025 (ಕರಾವಳಿ ಟೈಮ್ಸ್) : ಮಾಜಿ ಸಚಿವರೂ, ಕೆಪಿಸಿಸಿ ಉಪಾಧ್ಯಕ್ಷರೂ ಆಗಿರುವ ಬಿ ರಮಾನಾಥ ರೈ ಅವರ ಗೌರವಾಧ್ಯಕ್ತೆಯಲ್ಲಿ, ಕೆಪಿಸಿಸಿ ಸದಸ್ಯ ಪಿಯೂಸ್ ಎಲ್ ರೋಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ಬಂಟ್ವಾಳ ತಾಲೂಕಿನ ನಾವೂರ ಗ್ರಾಮದ ಕೂಡಿಬೈಲು ಎಂಬಲ್ಲಿ 14ನೇ ವರ್ಷದ ಮೂಡೂರು-ಪಡೂರು ಜೋಡುಕರೆ “ಬಂಟ್ವಾಳ ಕಂಬಳೋತ್ಸವ” ಮಾರ್ಚ್ 8 ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಗೌರವಾಧ್ಯಕ್ಷ ಬಿ ರಮಾನಾಥ ರೈ ಹೇಳಿದರು.
ಶನಿವಾರ ಬಿ ಸಿ ರೋಡಿನಲ್ಲಿ ಕಂಬಳೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಬಳಿಕ ಸುದ್ದಿಗರಾರರಿಗೆ ಮಾಹಿತಿ ನೀಡಿದ ಅವರು ಮಾರ್ಚ್ 8 ರಂದು ಶನಿವಾರ ಬೆಳಿಗ್ಗೆ 8:45ಕ್ಕೆ ದಿ ಆಲ್ಬರ್ಟ್ ಪಾಯ್ಸ್ ಕೂಡಿಬೈಲು ವೇದಿಕೆಯಲ್ಲಿ ಸೋಲೂರು ಕರ್ನಾಟಕ ಆರ್ಯ-ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು, ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಧರ್ಮಗುರು ವಂದನೀಯ ರಾಬರ್ಟ್ ಡಿಸೋಜ, ಆಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲ, ಅವರುಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು ಎಂದರು.
ಸಂಜೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ ಜಿ ಪರಮೇಶ್ವರ್, ವಿಧಾನಸಭಾ ಸ್ಪೀಕರ್ ಯು ಟಿ ಖಾದರ್ ಸಹಿತ ಹಲವು ಮಂತ್ರಿಗಳು, ಚಿತ್ರರಂಗದ ಪ್ರಸಿದ್ದ ಕಲಾವಿದರು, ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಎಂದ ಅವರು ಕಂಬಳ ಕ್ರೀಡೆಯ ಇತಿಹಾಸದಲ್ಲೇ ವಿಶಿಷ್ಟವಾಗಿ ನಡೆಯುವ ಬಂಟ್ವಾಳ ಕಂಬಳೋತ್ಸವ ಇನ್ನಷ್ಟು ವೈಶಿಷ್ಟ್ಯಪೂರ್ಣವಾಗಿ ನಿಟ್ಟಿನಲ್ಲಿ ಸಕಲ ಸಿದ್ದತೆಗಳು ನಡೆಯುತ್ತಿದೆ ಎಂದರು.
ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ಮಾತನಾಡಿ, ಸಮಾಜದ ಎಲ್ಲ ವಿಭಾಗದ ಜನರನ್ನು ಒಗ್ಗೂಡಿಸಿಕೊಂಡು ಕಂಬಳ ಸಮಿತಿ ರಚಿಸಲಾಗಿದ್ದು, ಕಂಬಳೋತ್ಸವ ಕೂಡಾ ಎಲ್ಲ ವರ್ಗದ ಜನ ಭಾಗವಹಿಸುವಂತಹ ವಾತಾವರಣ ನಿರ್ಮಿಸಲಾಗಿದೆ ಎಂದರು.
ಈ ಸಂದರ್ಭ ಕಂಬಳ ಸಮಿತಿಯ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬೇಬಿ ಕುಂದರ್, ಬಿ ಎಂ ಅಬ್ಬಾಸ್ ಅಲಿ, ಸದಾಶಿವ ಬಂಗೇರ, ಬಾಲಕೃಷ್ಣ ಅಂಚನ್, ರಾಜೀವ ಶೆಟ್ಟಿ ಎಡ್ತೂರು, ಚಂದ್ರಶೇಖರ ಭಂಡಾರಿ, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಪದ್ಮನಾಭ ರೈ, ಶಬೀರ್ ಸಿದ್ದಕಟ್ಟೆ ಮೊದಲಾದವರು ಜತೆಗಿದ್ದರು.
0 comments:
Post a Comment