ಮಂಗಳೂರು, ಜನವರಿ 30, 2024 (ಕರಾವಳಿ ಟೈಮ್ಸ್) : ಪ್ರಧಾನಿ ಮೋದಿ ವಿದೇಶದಲ್ಲಿ ಗಾಂಧೀಜಿ ಪುತ್ಥಳಿಗೆ ತಲೆಬಾಗುತ್ತಾರೆ. ಇಲ್ಲಿ ಗಾಂಧಿ ಅವರನ್ನು ಅಪಹಾಸ್ಯ ಮಾಡುತ್ತಾರೆ. ಗಾಂಧಿ ಬಗ್ಗೆ ಪ್ರಧಾನಿಗೆ ತಿಳಿದಿರದೇ ಇರಬಹುದು ಆದರೆ ಜಗತ್ತಿಗೆ ಗೊತ್ತಿದೆ. ಅವರ ವಿಚಾರಧಾರೆ, ಮೌಲ್ಯಗಳು ಭಾರತದಲ್ಲಿ ಮಾತ್ರವಲ್ಲ ಜಗತ್ತಿನಲ್ಲಿಯೇ ಇಂದಿಗೂ ಪ್ರಸ್ತುತ ಎಂದು ಮಾಜಿ ಸಚಿವ ಬಿ ರಮಾನಾಥ ರೈ ಹೇಳಿದ್ದಾರೆ.
ಗುರುವಾರ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗಾಂಧಿ ಸಿನೆಮಾ ಬಂದ ನಂತರ ಗಾಂಧೀಜಿಯ ಪರಿಚಯ ಆಗಿದ್ದು ಎನ್ನುವ ವ್ಯಕ್ತಿ ಪ್ರಧಾನಿಯಾಗಿರುವುದು ದುರ್ದೈವ. ಸಮಾಜದಲ್ಲಿ ಹಿಂಸೆಯ ವಾತಾವರಣ ಹೆಚ್ಚುತ್ತಿದ್ದು, ಇದನ್ನು ತಡೆಗಟ್ಟಲು ಗಾಂಧೀಜಿಯವರ ಅಹಿಂಸಾ ಧೋರಣೆಯನ್ನು ಮತ್ತೆ ಸಮಾಜಕ್ಕೆ ತಿಳಿಸಬೇಕಾಗಿದೆ. ಅವರ ತತ್ವಾದರ್ಶ, ಜಾತ್ಯಾತೀಯ ನಿಲುವು ಮತ್ತು ಸಂದೇಶಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯತೆ ಇದೆ ಎಂದರು.
ಸಾವಿನ ಬಳಿಕವೂ ಇಡೀ ದೇಶದ ಅಂತರಾತ್ಮವನ್ನು ಕಾಡುತ್ತಿರುವ ವ್ಯಕ್ತಿತ್ವ ಗಾಂಧಿಯವರದ್ದಾಗಿದ್ದು, ಅವರೊಬ್ಬ ಸಾಮಾಜಿಕ ಸುಧಾರಕ, ಧರ್ಮನಿಷ್ಠರು, ಸತ್ಯವಂತರು ಮತ್ತು ಧಾರ್ಮಿಕ ವ್ಯಕ್ತಿ ಎಂದ ರಮಾನಾಥ ರೈ ಬಣ್ಣಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ ಹರೀಶ್ ಕುಮಾರ್ ಮಾತನಾಡಿ, ಮಹಾತ್ಮಾ ಗಾಂಧಿ ಅಹಿಂಸಾ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಸತ್ಯ, ಅಹಿಂಸೆಯನ್ನು ಪ್ರತಿಪಾದಿಸಿದ ಅವರು ನುಡಿದಂತೆ ಬದುಕಿದ್ದ ಅಪರೂಪದ ಮಹಾನ್ ವ್ಯಕ್ತಿ. ದೇಶದ ಸಾಮಾನ್ಯ ವ್ಯಕ್ತಿಗೂ ರಾಜಕೀಯ ಚಿಂತನೆಗೆ ಹಚ್ಚಿದವರು ಗಾಂಧೀಜಿ. ಗಾಂಧಿ ಎಂದರೆ ಕೇವಲ ವ್ಯಕ್ತಿಯಲ್ಲ ಜೀವನ ವಿಧಾನ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ ಆರ್ ಲೋಬೊ, ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್ ನುಡಿನಮನ ಸಲ್ಲಿಸಿದರು. ಮಂಗಳೂರು ನಗರ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಜಿಲ್ಲಾ ಮುಂಚೂಣಿ ಘಟಕಾಧ್ಯಕ್ಷರಾದ ಕೆ ಕೆ ಶಾಹುಲ್ ಹಮೀದ್, ಜೋಕಿಂ ಡಿಸೋಜ, ದಿನೇಶ್ ಮೂಳೂರು, ಪ್ರಮುಖರಾದ ಟಿ ಹೊನ್ನಯ್ಯ, ನೀರಜ್ ಚಂದ್ರಪಾಲ್, ಟಿ ಕೆ ಸುಧೀರ್, ಶಬ್ಬೀರ್ ಸಿದ್ದಕಟ್ಟೆ, ಕೆ ಅಪ್ಪಿ, ಯೋಗೀಶ್ ಕುಮಾರ್, ಸಲೀಂ ಪಾಂಡೇಶ್ವರ, ಅಬ್ದುಲ್ ರಹಿಮಾನ್ ಪಡ್ಪು, ವಹಾಬ್ ಕುದ್ರೋಳಿ, ರಮಾನಂದ ಪೂಜಾರಿ, ಟಿ ಸಿ ಗಣೇಶ್, ಮೋಹನ್ ದಾಸ್ ಕೊಟ್ಟಾರಿ, ಸಬಿತಾ ಮಿಸ್ಕಿತ್, ಚಂದ್ರಕಲಾ ಜೋಗಿ, ಮಂಜುಳಾ ನಾಯಕ್, ಜಾರ್ಜ್, ದುರ್ಗಾ ಪ್ರಸಾದ್, ಸೌಹಾನ್ ಎಸ್ ಕೆ, ಸಮರ್ಥ್ ಭಟ್ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment