ಉಪ್ಪಿನಂಗಡಿ, ಜನವರಿ 17, 2025 (ಕರಾವಳಿ ಟೈಮ್ಸ್) : ಸ್ವತಃ ಗಾಂಜಾ ಸೇವಿಸಿದ್ದಲ್ಲದೆ ಅಟೋ ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕಾಗಿ ಸಾಗಾಟ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸರು ಅಟೋ, ಗಾಂಜಾ ಸಹಿತ ವ್ಯಕ್ತಿಯನ್ನು ಬಂಧಿಸಿದ ಘಟನೆ ಪುತ್ತೂರು ತಾಲೂಕು, 34ನೇ ನೆಕ್ಕಿಲಾಡಿ ಗ್ರಾಮದ ಬೊಳ್ಳಾರ ಎಂಬಲ್ಲಿ ಗುರುವಾರ ನಡೆದಿದೆ.
ಬಂಧಿತ ಗಾಂಜಾ ವ್ಯಸನಿಯನ್ನು ಬೆಳ್ತಂಗಡಿ ತಾಲೂಕು, ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಅಬ್ದುಲ್ ಸಲೀಂ (35) ಎಂದು ಹೆಸರಿಸಲಾಗಿದೆ. ಬಂಧಿತ ವ್ಯಕ್ತಿಯ ಅಟೋ ರಿಕ್ಷಾದಲ್ಲಿದ್ದ ಒಂದೂವರೆ ಕೆಜಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗುರುವಾರ ಬೆಳಿಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ಪಿಎಸ್ಸೈ ಅವಿನಾಶ್ ಎಚ್ ಅವರ ನೇತೃತ್ವದ ಪೊಲೀಸರು ಬೊಳ್ಳಾರ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ, ಬಂಟ್ವಾಳ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕೆಎ19 ಡಿ5283 ನೋಂದಣಿ ಸಂಖ್ಯೆಯ ಅಟೋ ರಿಕ್ಷಾವನ್ನು ತಪಾಸಣೆಗಾಗಿ ನಿಲ್ಲಿಸಲು ಸೂಚಿಸಿದಾಗ ಚಾಲಕ ರಿಕ್ಷಾ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿದ್ದಲ್ಲದೆ ಚಾಲಕ ಅಟೋ ರಿಕ್ಷಾದಿಂದ ಇಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಈ ಸಂದರ್ಭ ಆತನನ್ನು ಸುತ್ತುವರಿದು ಹಿಡಿದ ಪೊಲೀಸರು ಆತನನ್ನು ವಿಚಾರಿಸಿದಾಗ ಗಾಂಜಾ ಪ್ರಕರಣ ಬೆಳಕಿಗೆ ಬಂದಿದೆ.
ಅಟೋ ರಿಕ್ಷಾದಲ್ಲಿ ಪತ್ತೆಯಾದ ಒಂದೂವರೆ ಕೆಜಿ ಗಾಂಜಾವನ್ನು ತನ್ನ ಪರಿಚಯದ ನೌಶದ್ ಎಂಬಾತ ಸೇವನೆ ಮಾಡಲು ಮತ್ತು ಗಿರಾಕಿಗಳಿಗೆ ಮಾರಾಟ ಮಾಡಲು ನೀಡಿರುವುದಾಗಿ ಆರೋಪಿ ಸಲೀಂ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ವಶಪಡಿಸಿಕೊಂಡಿರುವ ಗಾಂಜಾದ ಮೌಲ್ಯ 15 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment