ಬಂಟ್ವಾಳ, ಜನವರಿ 04, 2025 (ಕರಾವಳಿ ಟೈಮ್ಸ್) : ತನಿಖಾ ತಂಡದ ಹೆಸರು ಹೇಳಿ ಮನೆಗೆ ನುಗ್ಗಿದ ತಂಡವೊಂದು ಬೀಡಿ ಉದ್ಯಮಿಯ ಲಕ್ಷಾಂತರ ರೂಪಾಯಿ ನಗದು ಹಣ ಲೂಟಿಗೈದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿ ಶುಕ್ರವಾರ ರಾತ್ರಿ ವೇಳೆ ನಡೆದಿದೆ.
ಇಲ್ಲಿನ ನಿವಾಸಿ ಸಿಂಗಾರಿ ಬೀಡಿ ಮಾಲಕ ಹಾಜಿ ಎನ್ ಸುಲೈಮಾನ್ ಅವರ ಮನೆಯಲ್ಲಿ ಈ ದರೋಡೆ ಕೃತ್ಯ ನಡೆದಿದೆ. ಶುಕ್ರವಾರ ರಾತ್ರಿ ಸುಮಾರು 8 ಗಂಟೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡ ರಾತ್ರಿ ಸುಮಾರು 10.30 ಗಂಟೆವರೆಗೆ ದಾಳಿ ನಡೆಸಿದ ತಂಡ ತನಿಖೆಯ ನಾಟವಾಡಿ ಬಳಿಕ ನಗದು ಲೂಟಿಗೈದು ಪರಾರಿಯಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ವಿಟ್ಲ ಪೊಲೀಸರಿಗೆ ದೂರು ನೀಡಿರುವ ಹಾಜಿ ಸುಲೈಮಾನ್ ಅವರು ಪುತ್ರ ಮಹಮ್ಮದ್ ಇಕ್ಬಾಲ್ (27) ಅವರು ನಾನು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ತಂದೆಯವರು ಬೀಡಿ ಉದ್ಯಮವನ್ನು ನಡೆಸುತ್ತಿರುತ್ತಾರೆ. ನಮ್ಮ ಮನೆಗೆ ಜನವರಿ 3 ರಂದು ಶುಕ್ರವಾರ ರಾತ್ರಿ 8.10 ರ ಸುಮಾರಿಗೆ ತಮಿಳುನಾಡು ನೋಂದಣೆ ಹೊಂದಿರುವ ಕಾರಿನಲ್ಲಿ 6 ಜನ ಅಪರಿಚಿತ ವ್ಯಕ್ತಿಗಳು ಬಂದು, ತಮ್ಮನ್ನು ಇಡಿ ಅಧಿಕಾರಿಗಳೆಂದು ಪರಿಚಯಿಸಿಕೊಂಡು, ಮನೆಯನ್ನು ಪರಿಶೀಲನೆ ನಡೆಸಲು ಅದೇಶವಾಗಿರುತ್ತದೆ ಎಂಬುದಾಗಿ ತಿಳಿಸಿ ಮನೆಗೆ ಪ್ರವೇಶಿಸಿ, ಮನೆ ಮಂದಿಯ 5 ಮೊಬೈಲ್ ಫೋನ್‍ಗಳನ್ನು ಪಡೆದುಕೊಂಡು ಬಳಿಕ ಮನೆಯನ್ನು ಹುಡುಕಾಡಿರುತ್ತಾರೆ.
ಈ ವೇಳೆ ತಂದೆಯವರ ಕೊಣೆಯ ಕಪಾಟಿನಲ್ಲಿ ವ್ಯವಹಾರಕ್ಕಾಗಿ ಇಟ್ಟಿದ್ದ ಸುಮಾರು 25 ರಿಂದ 30 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು, “ಇಷ್ಟು ಹಣವನ್ನು ನಿಮ್ಮಲ್ಲಿ ಇಟ್ಟುಕೊಳ್ಳಲು ಅವಕಾಶವಿಲ್ಲ, ನಿಮ್ಮನ್ನು ಅರೆಸ್ಟ್ ಮಾಡುತ್ತೇವೆ ಮತ್ತು ಕಸ್ಟಡಿ ತೆಗೆದುಕೊಳ್ಳುತ್ತೇವೆ ಎಂಬುದಾಗಿ ಹೇಳಿರುತ್ತಾರೆ. ರಾತ್ರಿ ಸುಮಾರು 10.30 ಗಂಟೆಗೆ ಆರೋಪಿಗಳು ಮನೆಯಿಂದ ಹೊರಬಂದು ತಾವುಗಳು ಪಡೆದುಕೊಂಡಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ನೀಡಿ, ಸದ್ರಿ ಹಣವನ್ನು ಬೆಂಗಳೂರಿನಲ್ಲಿರುವ ಆಫೀಸಿನಿಂದ ಪಡೆದುಕೊಳ್ಳುವಂತೆ ತಿಳಿಸಿ ಹೋಗಿರುತ್ತಾರೆ. ಈ ಬಗ್ಗೆ ನಾವು ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದಾಗ ಅಪರಿಚಿತ ವ್ಯಕ್ತಿಗಳು ಇ ಡಿ ಅಧಿಕಾರಿಗಳಂತೆ ನಟಿಸಿ ಮನೆಯಿಂದ ಸುಮಾರು 25 ರಿಂದ 30 ಲಕ್ಷ ಹಣವನ್ನು ಮತ್ತು 5 ಮೊಬೈಲ್ ಫೋನ್‍ಗಳನ್ನು ಪಡೆದುಕೊಂಡು ವಂಚನೆ ಮಾಡಿರುವುದು ತಿಳಿದು ಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಸ್ಥಳಕ್ಕಾಗಮಿಸಿದ ಜಿಲ್ಲಾ ಎಸ್ಪಿ ಯತೀಶ್ ಎನ್ ಅವರು ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
0 comments:
Post a Comment