ಬಂಟ್ವಾಳ, ಜನವರಿ 18, 2025 (ಕರಾವಳಿ ಟೈಮ್ಸ್) : ಅವ್ಯವಸ್ಥೆಯ ಆಗರವಾಗಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಬಗ್ಗೆ ಮೊದಲೇ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಮಧ್ಯೆ ಇದೀಗ ಇಲ್ಲಿನ ಟೋಲ್ ಗೇಟ್ ಸಿಬ್ಬಂದಿಯೋರ್ವ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ ಗೂಂಡಾಗಿರಿ ಪ್ರದರ್ಶಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಇಲ್ಲಿನ ಸಿಬ್ಬಂದಿಗಳ ಅನಾಗರಿಕ ವರ್ತನೆ ಹಾಗೂ ರೌಡಿಸಂ ರೀತಿಯ ನಡವಳಿಕೆ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಮತ್ತೆ ಗರಂ ಆಗಿ ಪ್ರತಿಕ್ರಯಿಸುತ್ತಿದ್ದಾರೆ.
ಇಲ್ಲಿನ ಟೋಲ್ ಗೇಟ್ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದ್ದು, ಕೇಂದ್ರ ಸರಕಾರದ ಯಾವುದೇ ನೀತಿ-ನಿಯಮಗಳೂ ಇಲ್ಲಿ ಪಾಲನೆಯಾಗುತ್ತಿಲ್ಲ. ದರೋಡೆ ರೀತಿಯ ಬಲವಂತದ ವಸೂಲಾತಿ ಮಾತ್ರ ಇಲ್ಲಿ ನಡೆಯುತ್ತಿದೆ ಎಂದು ಸಾರ್ವಜನಿಕರು ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ.
ವಾಹನ ಸವಾರರ ಸವಾರಿಗೆ ಬೇಕಾದ ಸಾಕಷ್ಟು ಲೇನ್ ಗಳು ಇಲ್ಲ. ತುರ್ತು ವಾಹನ ಸಂಚಾರಕ್ಕೆ ಬೇಕಾಗುವ ವ್ಯವಸ್ಥೆಗಳೂ ಇಲ್ಲಿಲ್ಲ. ದ್ವಿಚಕ್ರ-ತ್ರಿಚಕ್ರ ವಾಹನ ಸವಾರರು ತೆರಳಬೇಕಾದ ಮಾರ್ಗಗಳನ್ನೂ ಇಲ್ಲಿ ಗೇಟ್ ಅಳವಡಿಸಿ ಬಂದ್ ಮಾಡುವ ಮೂಲಕ ಸಣ್ಣ ವಾಹನಗಳ ಸಂಚಾರವನ್ನೂ ನಿರ್ಬಂಧಿಸಲಾಗಿದೆ. ಇಲ್ಲಿನ ರಸ್ತೆ ವ್ಯವಸ್ಥೆ ಹೇಗೂ ನಾದುರಸ್ತಿಯಲ್ಲಿದೆ. ವಾಹನ ಸವಾರರು ಸಲೀಸಾಗಿ ಸಂಚರಿಸಲು ಸಾಧ್ಯವಾಗದೆ ನೀರಿನಲ್ಲಿ ದೋಣಿ ಸಂಚರಿಸಿದಂತೆ ಪ್ರಯಾಣಿಸಬೇಕಾದ ದುಸ್ಥಿತಿಯಲ್ಲಿ ಇಲ್ಲಿನ ರಸ್ತೆಗಳು ಇವೆ.
ಈ ಎಲ್ಲ ಅವ್ಯವಸ್ಥೆ, ಸಮಸ್ಯೆಗಳ ಆಗರದಲ್ಲಿರುವ ಇಲ್ಲಿನ ಟೋಲ್ ಗೇಟ್ ಕೇಂದ್ರದಲ್ಲಿ ಎಲ್ಲದಕ್ಕೂ ಮಿಗಿಲಾಗಿ ಸಿಬ್ಬಂದಿಗಳು ವಾಹನ ಸವಾರರ ಮೇಲೆ ನಡೆಸುವ ರೇಗಾಟ, ಗೂಂಡಾಗಿರಿ, ರೌಡಿಸಂ ಇನ್ನಿಲ್ಲದ ರೀತಿಯಲ್ಲಿ ಸಾರ್ವಜನಿಕ ತೊಂದರೆಯನ್ನು ಹುಟ್ಟು ಹಾಕಿದೆ. ಈ ಬಗ್ಗೆ ಸ್ಥಳೀಯರು ಹಾಗೂ ವಾಹನ ಸವಾರರು ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ದೂರಿಕೊಂಡರೂ ಯಾವುದೇ ಸಂಬಂಧಪಟ್ಟ ಇಲಾಖೆಯಾಗಲೀ, ಜನಪ್ರತಿನಿಧಿಗಳಾಗಲೀ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ ಎನ್ನುವ ಸಾರ್ವಜನಿಕರು ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಟೋಲ್ ಬೂತ್ ಸಿಬ್ಬಂದಿಗಳ ರೌಡಿಸಂ ರೀತಿಯ ವರ್ತನೆಗೆ ಮುಂದಿನ ದಿನಗಳಲ್ಲಿ ವಾಹನ ಸವಾರರು, ಪ್ರಯಾಣಿಕರು ಹಾಗೂ ಸಾರ್ವಜನಿಕರು ಕೂಡಾ ಅದೇ ಹಾದಿಯಲ್ಲಿ ಪ್ರತ್ಯುತ್ತರ ಅಥವಾ ಪ್ರತಿಕ್ರಿಯೆಯನ್ನು ನೀಡಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ. ತಕ್ಷಣ ಟೋಲ್ ನಿರ್ವಹಣಾ ಗುತ್ತಿಗೆದಾರರು, ಸಂಬಂಧಪಟ್ಟ ಇಲಾಖಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಾರ್ವಜನಿಕರಿಗಾಗುತ್ತಿರುವ ತೊಂದರೆಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಲಾಗಿದೆ.
0 comments:
Post a Comment