ಬಂಟ್ವಾಳ, ಜನವರಿ 31, 2024 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಶ್ರೀಶಾರದಾ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ, ಪುತ್ತೂರಿನ ಮುಕ್ರಂಪಾಡಿ ನಿವಾಸಿ ಬೊಮ್ಮಣ್ಣ ಗೌಡ (76) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಗುರುವಾರ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪಾಣೆಮಂಗಳೂರು ಶ್ರೀ ಶಾರದಾ ಪ್ರೌಢಶಾಲೆಯಲ್ಲಿ 1972 ರಿಂದ 2007 ರವರೆಗೆ 35 ವರ್ಷಗಳ ಕಾಲ ಗಣಿತ ಮತ್ತು ವಿಜ್ಞಾನ ಶಿಕ್ಷಕರಾಗಿ, ವಿದ್ಯಾರ್ಥಿ ಸ್ನೇಹಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಇವರು ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯಾಗಿದ್ದ ಗಣಿತ ವಿಷಯವನ್ನು ಅತ್ಯಂತ ಸರಳ ಹಾಗೂ ಸುಲಭದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ನಿಸ್ಸೀಮರಾಗಿದ್ದರು. ವಿದ್ಯಾರ್ಥಿಗಳೊಂದಿಗೆ, ಊರಿನ ನಾಗರಿಕರೊಂದಿಗೆ ಹಾಗೂ ಎಲ್ಲಾ ಸಹೋದ್ಯೋಗಿ ಶಿಕ್ಷಕರೊಂದಿಗೂ ಉತ್ತಮ ಒಡನಾಟವನ್ನು ಇಟ್ಟುಕೊಂಡು ಅತ್ಯಂತ ಸರಳ ಹಾಗೂ ಶಿಸ್ತು ಬದ್ದ ನಡವಳಿಕೆ ಹೊಂದಿದ್ದರು.
2003 ರಿಂದ 2007 ರವರೆಗೆ 4 ವರ್ಷಗಳ ಅವಧಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯರಾಗಿ ಪದೋನ್ನತಿ ಹೊಂದಿ ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮತ್ತು ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶದಲ್ಲಿ ಅಮೂಲಾಗ್ರ ಬದಲಾವಣೆಯನ್ನು ತಂದು ಅವರ ಅವಧಿಯಲ್ಲಿ ಶಾಲಾ ಎಸ್ ಎಸ್ ಎಲ್ ಸಿ ಫಲಿತಾಂಶ ಶೇಕಡ 95ಕ್ಕಿಂತ ಹೆಚ್ಚಿನ ಫಲಿತಾಂಶ ಲಭಿಸಿರುವುದು ಅವರ ಕಾರ್ಯಾತತ್ಪರತೆಗೆ ಸಾಕ್ಷಿಯಾಗಿತ್ತು.
ಮೃತರು ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಅವರ ಅಗಲಿಕೆಗೆ ಶಾರದಾ ಪ್ರೌಢಶಾಲಾ ಆಡಳಿತ ಸಮಿತಿ, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
0 comments:
Post a Comment