ಶಾಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಸಾಹಿತ್ಯಾನುಭವ ಹಂಚಿಕೊಳ್ಳಲು ನಾನು ಸದಾ ಸಿದ್ದ ಎಂದ ಎಳೆಯರ ಗೆಳೆಯ
ನಾನು “ಸಾಹಿತ್ಯದಲ್ಲಿ ಸಾಮರಸ್ಯ” ಕಂಡುಕೊಂಡವನು, ಅದರಲ್ಲಿ ಹೆದರಿಕೆ, ಭಯ ಯಾವುದೂ ಇಲ್ಲ : ಕರಾವಳಿ ಟೈಮ್ಸ್ ಜೊತೆ ಮುಳಿಯ ಮಾತುಕತೆ
ಬಂಟ್ವಾಳ, ಜನವರಿ 06, 2025 (ಕರಾವಳಿ ಟೈಮ್ಸ್) : ಕನ್ನಡ ಸಾಹಿತ್ಯ ಪರಿಷತ್ ಸಹಿತ ವಿವಿಧ ಸಂಘಟನೆಗಳು ಕನ್ನಡ ಪರ ಕಾರ್ಯಕ್ರಮಗಳು, ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಾ ಬರುತ್ತಿರುವುದರ ಹೊರತಾಗಿಯೂ ಕನ್ನಡ ಶಾಲೆಗಳು ಮುಚ್ಚುವ ಸನ್ನಿವೇಶ ನಿರ್ಮಾಣವಾಗುತ್ತಿರುವುದು ಮಾತ್ರ ದುರಂತ ಎಂದು 23ನೇ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಎಳೆಯ ಗೆಳೆಯ ಖ್ಯಾತಿಯ ಹಿರಿಯ ಸಾಹಿತಿ ಮುಳಿಯ ಶಂಕರ ಭಟ್ಟ ತೀವ್ರ ಖೇದ ವ್ಯಕ್ತಪಡಿಸಿದ್ದಾರೆ.
ಸಾಹಿತ್ಯ ಸಮ್ಮೇಳನ ನಡೆದ ಮಂಚಿ ಸರಕಾರಿ ಪ್ರೌಢಶಾಲಾ ವಠಾರದಲ್ಲಿ ಕರಾವಳಿ ಟೈಮ್ಸ್ ಜೊತೆ ತಮ್ಮ ಅಂತರಾಳ ಹಂಚಿಕೊಂಡ ಅವರು, ಕನ್ನಡ ಎಂಬುದು ಇವತ್ತು ಶಾಲೆಗಳಲ್ಲಿ ಪರೀಕ್ಷಾ ವಿಷಯವಾಗಿ ಮಾತ್ರ ಉಳಿದುಕೊಂಡಿದೆ. ಆದರೆ ಶಾಲಾ ವಿದ್ಯಾರ್ಥಿಗಳಲ್ಲೇ ಕನ್ನಡ ಭಾಷಾಭಿಮಾನ ಹಾಗೂ ಸಾಹಿತ್ಯದ ಕಿಚ್ಚು ಹಚ್ಚುವಲ್ಲಿ ಶಿಕ್ಷಕರೂ ವಿಫಲರಾಗುತ್ತಿರುವುದು ಮತ್ತಷ್ಟು ದುರಂತ ಎಂದು ವಿಷಾದಿಸಿದರು.
ಶಿಕ್ಷಣ ಇವತ್ತು ವ್ಯವಹಾರವಾಗಿ ಬಿಟ್ಟಿದೆ. ಶಿಕ್ಷಕರು ಕೂಡಾ ಸಂಬಳಕ್ಕಾಗಿ ಮಾತ್ರ ದುಡಿಯುವ ಸನ್ನಿವೇಶ ನಿರ್ಮಾಣವಾಗಿದೆ. ತಾನು ಪಡೆಯುವ ವೇತನದ ಹೊರತಾಗಿ ವಿದ್ಯಾರ್ಥಿಗಳನ್ನು ವಿಶಾಲ ದೃಷ್ಟಿಕೋನದಲ್ಲಿ ಬೆಳೆಸಲು ಶಿಕ್ಷಕ ವೃಂದವೂ ವಿಫಲವಾಗುತ್ತಿದೆ. ಶಾಲೆಗಳಲ್ಲಿ ಕನ್ನಡ ಭಾಷಾ ಪಾಠ ಪುಸ್ತಕದ ಹೊರತಾಗಿ ಕನ್ನಡ ಭಾಷೆ, ಸಾಹಿತ್ಯದ ಬಗ್ಗೆ ವಿದ್ಯಾರ್ಥಿಗಳಿಗೆ ವಾರದಲ್ಲಿ ಕನಿಷ್ಠ ಒಂದು ತಾಸು ಕೂಡಾ ಚರ್ಚಿಸುವ, ವಿಮರ್ಶಿಸುವ ಆ ಮೂಲಕ ಕನ್ನಡ ಭಾಷೆಯ ಸಾಹಿತ್ಯದ ಸ್ವಾದವನ್ನು ವಿದ್ಯಾರ್ಥಿಗಳಿಗೆ ಉಣಬಡಿಸುವಲ್ಲಿ ಶಿಕ್ಷಕರು, ಶಾಲಾಡಳಿತ ಮಂಡಳಿ ಜೊತೆಗೆ ಸರಕಾರಗಳೂ ವಿಫಲವಾಗುತ್ತಿದೆ ಎಂದ ಮುಳಿಯ ಅವರು, ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕನಿಷ್ಠ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಕ್ರಮ ಜರುಗಬೇಕು. ಈ ಬಗ್ಗೆ ನನ್ನ ಸಹಕಾರ ನಾನು ಸದಾ ನೀಡಲು ಸಿದ್ದ. ಎಲ್ಲಿಗೆ ಕರೆದರೂ ನನ್ನ ಕೇವಲ ಹೋಗಿ ಬರುವ ಖರ್ಚು ನೀಡಿದರೆ ನಾನು ವಿದ್ಯಾರ್ಥಿಗಳ, ಶಿಕ್ಷಕರ ಜೊತೆ ನನ್ನ ಸಾಹಿತ್ಯಿಕ ಅನುನುಭವಗಳನ್ನು ಹಂಚಿಕೊಳ್ಳಲು ಸಿದ್ದನಿದ್ದೇನೆ ಎಂದು ಭರವಸೆ ನೀಡಿದ್ದಾರೆ.
ಜನ ಇವತ್ತು ಶಿಕ್ಷಣವನ್ನು ಹಣಕ್ಕಾಗಿ ಮಾತ್ರ ಪಡೆಯುವಂತಾಗಿದೆ. ಮನುಷ್ಯ ಇಂದು ಆಸೆಗಳ ದಾಸನಾಗಿ ಬಿಟ್ಟಿದ್ದಾನೆ. ಆಸೆಗಳಿಗೆ ದಾಸನಾಗಿ ಬಿಟ್ಟ ಮನುಜ ಕೊನೆವರೆಗೂ ಆಸೆ, ಅತಿಯಾಸೆಗಳ ದಾಸ್ಯತ್ವದಲ್ಲೇ ಜೀವನ ಕೊನೆಗೊಳಿಸುತ್ತಾನೆ. ಆದರೆ ಆಸೆಗಳನ್ನು ದಾಸನಾಗಿಕೊಳ್ಳುವ ಮನಷ್ಯ ಕೊನೆವರೆಗೂ ಆಸೆಗಳನ್ನು ದಾಸನಾಗಿಯೇ ತನ್ನ ಬಳಿ ಬರುವಂತೆ ನೋಡಿಕೊಳ್ಳುತ್ತಾನೆ. ಆಗ ಮಾತ್ರ ಜೀವನ ಪರಿಪೂರ್ಣವಾಗಲು ಸಾಧ್ಯ ಎಂದ ಎಳೆಯರ ಗೆಳೆಯ ಅವರು, ಈ ಜೀವನದಲ್ಲಿ ಎಷ್ಟೇ ಸಂಪಾದಿಸಿದರೂ ಕೊನೆಗೊಂದು ದಿನ ಸಾವು ಬರುತ್ತದೆ. ಸತ್ತಾಗ ಯಾವುದನ್ನೂ ಕೊಂಡು ಹೋಗಲು ಇಲ್ಲ ಎಂಬುದನ್ನು ಚೆನ್ನಾಗಿಯೇ ಅರಿತುಕೊಂಡಿರುವ ಮನುಷ್ಯ ಅದರ ಮರ್ಮವನ್ನು ಅರಿತುಕೊಳ್ಳುವಲ್ಲಿ ವಿಫಲನಾಗಿದ್ದಾನೆ. ತನ್ನ ಬದುಕಿಗೆ ಬೇಕಾಗುವಷ್ಟು ತನ್ನ ಬಳಿ ಇದ್ದರೂ ಮನುಷ್ಯ ಅತಿಯಾಸೆಗೆ ಬಲಿ ಬೀಳುತ್ತಾನೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ನಾವು ಮೊದಲು ಮನುಷ್ಯನಾಗಬೇಕು. ಬಳಿಕ ಭಟ್ಟನೋ, ಬ್ಯಾರಿಯೋ, ಕ್ರೈಸ್ತನೋ ಇನ್ನೊಂದು ಜಾತಿಯೋ ಎಂದು ಗುರುತಿಸಬೇಕು. ಮನುಷ್ಯನೇ ಆಗದಿದ್ದರೆ ಏನೂ ಪ್ರಯೋಜನ ಎಂದು ಪ್ರಶ್ನಿಸಿದ ಶಂಕರ ಭಟ್ಟರು, ಅದೇ ರೀತಿ ನಾವು ಮೊದಲು ಭಾರತೀಯರಾಗಬೇಕು. ನಂತರ ಕನ್ನಡಿಗನೋ, ತಮಿಳಿಗನೋ, ತೆಲುಗನೋ ಎಂದು ಗುರುತಿಸಿಕೊಳ್ಳಬೇಕು. ಬಳಿಕ ಕನ್ನಡಿಗನಾಗಬೇಕು. ಕನ್ನಡಿಗನಾದ ಮೇಲೆ ಭಟ್ರೋ, ಸೋಜನೋ, ಸಾಹುಕಾರನೋ ಎಂಬುದು ಮುಖ್ಯ ಅಷ್ಟೆ. ನಾನೋರ್ವ ಸಾಹಿತಿಯಾಗಿದ್ದುಕೊಂಡು ಸಾಹಿತ್ಯದಲ್ಲಿ ಸಾಮರಸ್ಯ ಕಂಡುಕೊಂಡವನು. ನಾನು ಜಾತಿಯಲ್ಲಿ ಹಿಂದುವಾದರೂ ಇತರ ಸಹೋದರ ಧರ್ಮೀಯರ ಪುಣ್ಯ ಕ್ಷೇತ್ರಗಳಿಗೂ ಹೋಗುತ್ತೇನೆ. ಅಲ್ಲಿನ ಸಂಪ್ರದಾಯ ಏನು ಎಂದು ತಿಳಿದುಕೊಂಡು ಆ ಸಂಪ್ರದಾಯ ಕೈಗೊಳ್ಳುತ್ತೇನೆ. ಈ ಬಗ್ಗೆ ನನಗೆ ಸ್ವಧರ್ಮೀಯರು ಬಹಿಷ್ಕಾರ ಹಾಕಿದರೂ ತೊಂದರೆ ಇಲ್ಲ. ನನಗೆ ಅದರಲ್ಲಿ ಯಾವುದೇ ಹೆದರಿಕೆ, ಭಯ ಯಾವುದು ಇಲ್ಲ ಎಂದು ಸ್ಪಷ್ಟ ಮಾತುಗಳನ್ನು ಹಂಚಿಕೊಂಡರು.
0 comments:
Post a Comment