ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕಲ್ಲಡ್ಕ ಶಾಖೆ ವಿನೂತನ ಸೌಲಭ್ಯದೊಂದಿಗೆ ಕಾವೇರಿ ಕಾಂಪ್ಲೆಕ್ಸಿಗೆ ಸ್ಥಳಾಂತರಗೊಂಡು ಕಾರ್ಯಾರಂಭ
ಬಂಟ್ವಾಳ, ಜನವರಿ 05, 2025 (ಕರಾವಳಿ ಟೈಮ್ಸ್) : ದಕ್ಷಿಣ ಕನ್ನಡ ಸಹಕಾರಿ ಕ್ಷೇತ್ರಕ್ಕೆ ಹೆಸರು ಪಡೆದ ಜಿಲ್ಲೆಯಾಗಿದ್ದು, ಇಲ್ಲಿ ಕೃಷಿ ಸಾಲ ಮರುಪಾವತಿಯಲ್ಲಿ ನೂರು ಶೇಕಡಾ ಸಾಧನೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ ಎಂ ಎನ್ ರಾಜೇಂದ್ರ ಕುಮಾರ್ ಹೇಳಿದರು.
ಬ್ಯಾಂಕಿನ ಕಲ್ಲಡ್ಕ ಶಾಖೆಯು ಹಲವು ವಿನೂತನ ಸೌಲಭ್ಯದೊಂದಿಗೆ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಕಾವೇರಿ ಸಂಕೀರ್ಣದ ನೆಲ ಅಂತಸ್ತಿಗೆ ಸೋಮವಾರ ಸ್ಥಳಾಂತರಗೊಂಡಿದ್ದು, ಸ್ಥಳಾಂತರಗೊಂಡ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಯಾವುದೇ ಒಬ್ಬ ರೈತ ಕೂಡಾ ಬ್ಯಾಂಕ್ ಸಾಲ ನೀಡಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಒಂದೇ ಒಂದು ಉದಾಹರಣೆ ಇಲ್ಲ. ಇದುವೇ ಜಿಲ್ಲೆಯ ನಮ್ಮ ಬ್ಯಾಂಕಿನ ಕಾರ್ಯಕ್ಷಮತೆಗೆ ಸಾಕ್ಷಿ ಎಂದರು.
ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸಹಕಾರಿ ಬ್ಯಾಂಕುಗಳು ಮಣೆ ಹಾಕಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಸ್ಪಷ್ಪಡಿಸಿದ ಅವರು, ಅದರಲ್ಲೂ ಸಹಕಾರಿ ಬ್ಯಾಂಕುಗಳು ಮಹಿಳೆಯರ ಸ್ವಾವಲಂಬನೆ ಹಾಗೂ ಅಭಿವೃದ್ದಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ. ಈ ವರ್ಷ ನಮ್ಮ ಸ್ವಸಹಾಯ ಗುಂಪುಗಳು ಕಾಲು ಶತಮಾನ ಪೂರೈಸುತ್ತಿದ್ದು, ಈ ಹಿನ್ನಲೆಯಲ್ಲಿ ಮಹಿಳೆಯರನ್ನು ಒಟ್ಟುಗೂಡಿಸುತ್ತೇವೆ, ಅವರನ್ನು ಗುರುತಿಸುತ್ತೇವೆ ಹಾಗೂ ಅವರಿಗೆ ನೂತನ ಸಮವಸ್ತ್ರಗಳನ್ನು ವಿತರಿಸುತ್ತೇವೆ ಎಂದರು.
ಮಾಜಿ ಶಾಸಕರುಗಳಾದ ಎ ರುಕ್ಮಯ್ಯ ಪೂಜಾರಿ ಹಾಗೂ ಕೆ ಪದ್ಮನಾಭ ಕೊಟ್ಟಾರಿ ಅವರು ಸ್ಥಳಾಂತರಗೊಂಡ ಶಾಖೆಗೆ ಶುಭ ಹಾರೈಸಿದರು. ಶಾಖಾ ಕಟ್ಟಡದ ಮಾಲಕ ವರದರಾಯ ಪ್ರಭು, ಬ್ಯಾಂಕ್ ನಿರ್ದೇಶಕರಾದ ವಿನಯ್ ಕುಮಾರ್ ಸೂರಿಂಜೆ, ಜಯರಾಮ್ ರೈ, ಶಶಿಕುಮಾರ್ ರೈ ಬೊಳ್ಯೊಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಭಾಗವಹಿಸಿದ್ದರು.
ಬ್ಯಾಂಕ್ ಹಿರಿಯ ನಿರ್ದೇಶಕ ಟಿ ಜಿ ರಾಜಾರಾಮ್ ಭಟ್ ಸ್ವಾಗತಿಸಿ, ದಿನೇಶ್ ಅಮೀನ್ ಕಾರ್ಯಕ್ರಮ ನಿರೂಪಿಸಿದರು.
ಸ್ಥಳಾಂತರಗೊಂಡ ಶಾಖೆಯು ಸಂಪೂರ್ಣ ಗಣಕೀಕೃತಗೊಂಡಿದ್ದು ಆರ್ ಟಿ ಜಿ ಎಸ್, ನೆಫ್ಟ್, ರೂಪೇ ಕಾರ್ಡ್ ಸೌಲಭ್ಯ ಹಾಗೂ ಕೋರ್ ಬ್ಯಾಂಕಿಂಗ್ ಸೌಲಭ್ಯ ಹೊಂದಿ ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಲಿದೆ.
0 comments:
Post a Comment