ಬಂಟ್ವಾಳ, ಜನವರಿ 09, 2025 (ಕರಾವಳಿ ಟೈಮ್ಸ್) : ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತನಿಖಾ ನೆಪದಲ್ಲಿ ಹಣ ದರೋಡೆಯಾಗಿರುವ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ಮಾಜಿ ಸಚಿವ ಬಿ ರಮಾನಾಥ ರೈ ಗುರುವಾರ ಭೇಟಿ ನೀಡಿ ಮನೆ ಮಂದಿ ಜೊತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಘಟನೆ ಕುರಿತಂತೆ ರಾಜ್ಯ ಗೃಹ ಸಚಿವರೊಂದಿಗೆ, ಪಶ್ಚಿಮ ವಲಯ ಐಜಿಪಿ ಹಾಗೂ ಜಿಲ್ಲಾ ಎಸ್ಪಿ ಅವರೊಂದಿಗೆ ಮಾತಾಡಿ ಇಂತಹ ಘಟನೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಥಮ ಬಾರಿಗೆ ನಡೆದಿದೆ. ಘಟನೆ ಬಗ್ಗೆ ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿದರು.
ಈ ಸಂದರ್ಭ ಕೊಳ್ನಾಡು ಗ್ರಾಮ ಪಂಚಾಯತ್ ಅದ್ಯಕ್ಷ ಮುಹಮ್ಮದ್ ಅಶ್ರಪ್ ಕೆ ಸಾಲೆತ್ತೂರು, ಬೊಳಂತೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ ರೈ, ಹಸೈನಾರ್ ತಾಳಿತ್ತನೂಜಿ ಮೊದಲಾದವರು ಜೊತೆಗಿದ್ದರು.
ವಿಟ್ಲ ಪೆÇಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ನಾರ್ಶದ ಮನೆಗೆ ಜನವರಿ 3 ರಂದು ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ತಮಿಳುನಾಡು ನೋಂದಾಯಿತ ಮಾರುತಿ ಎರ್ಟಿಗಾ ಕಾರಿನಲ್ಲಿ ಆಗಮಿಸಿದ ಸುಮಾರು 6 ಮಂದಿಯ ತಂಡ ನುಗ್ಗಿದ್ದು, ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ತನಿಖೆಯ ನಾಟಕವಾಡಿ ಮನೆಯಲ್ಲಿದ್ದ ಭಾರೀ ಪ್ರಮಾಣದ ನಗದು ಹಣ ಹಾಗೂ ಮನೆ ಮಂದಿಯ ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದರು. ಬಳಿಕ ದರೋಡೆಕೋರರು ಕೊಂಡು ಹೋಗಿದ್ದ ಮೊಬೈಲ್ ಫೆÇೀನ್ ಗಳು ಮನೆಯಲ್ಲೇ ಜ 7 ರಂದು ಪತ್ತೆಯಾಗಿತ್ತು.
0 comments:
Post a Comment