ಬಂಟ್ವಾಳ, ಜನವರಿ 14, 2025 (ಕರಾವಳಿ ಟೈಮ್ಸ್) : ಬಂಟ್ವಾಳ : ಮಧ್ಯರಾತ್ರಿಯ ವೇಳೆ ಕಾರೊಂದು ಮನೆಯ ಕಂಪೌಂಡ್ ಗೋಡೆ ಬೇಧಿಸಿ ಒಳನುಗ್ಗಿ ಆವರಣಗೋಡೆ ಪುಡಿಗಟ್ಟಿದ್ದಲ್ಲದೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರಿಗೂ ಹಾನಿಯಾದ ಘಟನೆ ಸಜಿಪಮೂಡ ಗ್ರಾಮದ ಪಣೋಲಿಬೈಲು ಕ್ರಾಸ್ ಬಳಿ ಸೋಮವಾರ ತಡ ರಾತ್ರಿ ಸಂಭವಿಸಿದೆ.
ಇಲ್ಲಿನ ನಿವಾಸಿ ನಝೀರ್ ಹಾಜಿ ಎಂಬವರ ಮನೆಯಲ್ಲಿ ಈ ದುರಂತ ಸಂಭವಿಸಿದ್ದು, ಕಾರು ಚಾಲಕ ಯಾರೆಂಬ ನಿಖರ ಮಾಹಿತಿ ಗೊತ್ತಾಗಿಲ್ಲ. ಸೋಮವಾರ ಮಧ್ಯರಾತ್ರಿ ಸುಮಾರು 1.30 ಗಂಟೆಯ ಸುಮಾರಿಗೆ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳೀಯ ನಿವಾಸಿಗಳು ಕಾರ್ಯಕ್ರಮವೊಂದಕ್ಕೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ಘಟನೆ ನಡೆದು ಕಾರಿನಲ್ಲಿದ್ದವರು ಯಾರಿಗೂ ತಿಳಿಯದಂತೆ ಓಟ ಕೀಳುವ ವೇಳೆ ಆ ಪೈಕಿ ಓರ್ವನನ್ನು ತಡೆ ಹಿಡಿದು ವಿಚಾರಿಸಿದ್ದಾರೆ ಎನ್ನಲಾಗಿದೆ. ಸ್ಥಳೀಯರು ಹಿಡಿದ ಯುವಕ ಕಾರಾಜೆ ಮೂಲದವ ಎನ್ನಲಾಗುತ್ತಿದೆ.
ಕಾರು ಚಾಲಕನ ಮಿತಿ ಮೀರಿದ ವೇಗದಿಂದಲೇ ಈ ಅವಘಡ ಸಂಭವಿಸಿದೆ ಎನ್ನಲಾಗುತ್ತಿದೆ. ಕಾರು ನೇರವಾಗಿ ಮನೆಯ ಆವರಣ ಗೋಡೆಗೆ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಆವರಣಗೋಡೆಯ ಒಂದು ಪಾಶ್ರ್ವ ಸಂಪೂರ್ಣ ಕುಸಿದು ಹಾನಿಗೊಂಡಿದೆ. ಅಲ್ಲದೆ ಕಂಪೌಂಡ್ ಒಳಭಾಗದಲ್ಲಿ ನಿಲ್ಲಿಸಲಾಗಿದ್ದ ಕಾರಿಗೂ ಹಾನಿಯಾಗಿದೆ. ಘಟನೆಯಿಂದ ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ ಎನ್ನಲಾಗಿದೆ.
ಕಾರಿನಲ್ಲಿ ಅಪ್ರಾಪ್ತ ಬಾಲಕರು ಇರುವ ಸಾಧ್ಯತೆ ಇದೆ ಎಂದು ಶಂಕಿಸಿರುವ ಸ್ಥಳೀಯರು ಮಧ್ಯರಾತ್ರಿ ಸಂಶಯಾಸ್ಪದವಾಗಿ ನಡೆದಿರುವ ಈ ಅವಘಡದ ಹಿಂದಿನ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಕೂಲಂಕುಷ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಜರುಗಿಸಬೇಕು ಎಂದು ಘಟನೆಯ ಬಗ್ಗೆ ಸ್ಥಳೀಯರು ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಅಪಘಾತಕ್ಕೀಡಾದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ಘಟನೆ ಬಗ್ಗೆ ನಿಖರ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.
0 comments:
Post a Comment