ಬಂಟ್ವಾಳ, ಜನವರಿ 11, 2025 (ಕರಾವಳಿ ಟೈಮ್ಸ್) : ಇಲ್ಲಿನ ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ಪೇಟೆ ಸಹಿತ ಆಲಡ್ಕ, ಮೆಲ್ಕಾರ್ ಮೊದಲಾದೆಡೆ ಚರಂಡಿ ವ್ಯವಸ್ಥೆ ಅಲ್ಲಲ್ಲಿ ದುರಸ್ತಿ ಹಾಗೂ ಶುಚೀಕರಣಕ್ಕಾಗಿ ಕಾಯುತ್ತಿದ್ದು, ಪುರಸಭಾಧ್ಯಕ್ಷರು ಈ ಬಗ್ಗೆ ಶೀಘ್ರ ಗಮನ ಹರಿಸಿ ಪರಿಹಾರ ಕಲ್ಪಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಾಣೆಮಂಗಳೂರು ಪೇಟೆಯಿಂದ ಆಲಡ್ಕ ಮಾರ್ಗವಾಗಿ ಮೆಲ್ಕಾರ್ ವರೆಗೆ ಚರಂಡಿ ವ್ಯವಸ್ಥೆ ಇದ್ದರೂ ಅಲ್ಲಲ್ಲಿ ಕುಸಿತ ಉಂಟಾಗಿ ದುರಸ್ತಿ ತುರ್ತು ಅವಶ್ಯಕತೆ ಇದೆ. ಅಲ್ಲದೆ ಚರಂಡಿ ನೀರು ಸೋರಿಕೆಯಾಗಿ ತ್ಯಾಜ್ಯ ನೀರು ರಸ್ತೆಯಲ್ಲೇ ಹರಿಯುತ್ತಿರುವ ಸಮಸ್ಯೆಯಿಂದಾಗಿ ದುರ್ನಾತ ಬೀರುತ್ತಿದೆ. ಇದರಿಂದಾಗಿ ಸ್ಥಳೀಯವಾಗಿ ಆರೋಗ್ಯ ಸಂಬಂಧಿ ಸಮಸ್ಯೆಗಳು ತಲೆದೋರುವ ಬಗ್ಗೆ ಭೀತಿ ಎದುರಾಗಿದ್ದು, ಪುರಸಭಾಡಳಿತ ಹಾಗೂ ಆರೋಗ್ಯಾಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುವಂತೆ ಜನ ಆಗ್ರಹಿಸಿದ್ದಾರೆ.
ಪಾಣೆಮಂಗಳೂರು ಹದಗೆಟ್ಟ ರಸ್ತೆ ಬಗ್ಗೆ ಪತ್ರಿಕಾ ವರದಿಗೆ ಸ್ಪಂದಿಸಿ ಶುಕ್ರವಾರ ಸ್ಥಳ ಪರಿಶೀಲನೆಗೆ ಬಂದಿದ್ದ ಲೋಕೋಪಯೋಗಿ ಇಲಾಖಾಧಿಕಾರಿಗಳ ಜೊತೆಯೂ ಇಲ್ಲಿನ ಚರಂಡಿ ಅವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರು ಅಹವಾಲು ಮಂಡಿಸಿದ್ದು, ಈ ಸಂದರ್ಭ ಅಧಿಕಾರಿಗಳು ಈಗಾಗಲೇ ಈ ಪ್ರದೇಶದಲ್ಲಿ ಚರಂಡಿ ನಿರ್ಮಾಣ ಪೂರ್ಣಗೊಂಡಿದೆ. ಅದರ ದುರಸ್ತಿ ಹಾಗೂ ಶುಚೀಕರಣ ಜವಾಬ್ದಾರಿ ಪುರಸಭಾಡಳಿತ ಹಾಗೂ ಆರೋಗ್ಯಾಧಿಕಾರಿಗಳದ್ದಾಗಿದ್ದು, ಸ್ಥಳೀಯ ಪುರಸಭಾ ಕೌನ್ಸಿಲರ್ ಗಳು ಈ ಬಗ್ಗೆ ಮುತುವರ್ಜಿ ವಹಿಸಿ ಪರಿಹಾರ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.
ಅಲ್ಲದೆ ಮೆಲ್ಕಾರ್ ಸಮೀಪದ ಮಹಾಬಲ ರಾವ್ ಮನೆಯಿಂದ ಆಲಡ್ಕ ಕಿರು ಸೇತುವೆವರೆಗೆ ರಸ್ತೆಯ ಎರಡೂ ಬದಿಗಳಲ್ಲೂ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲೇ ಹರಿದು ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದ್ದು, ಈ ಪರಿಸರದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಚರಂಡಿ ವ್ಯವಸ್ಥೆ ಕಲ್ಪಿಸುವಂತೆಯೂ ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment