ಬಂಟ್ವಾಳ, ಜನವರಿ 09, 2025 (ಕರಾವಳಿ ಟೈಮ್ಸ್) : ಡಾಮರೀಕರಣ ಕಾಣದೆ ಹಲವು ವರ್ಷಗಳೇ ಕಳೆದು ನಾದುರಸ್ತಿಯಲ್ಲಿರುವ ಪಾಣೆಮಂಗಳೂರು ಪೇಟೆಯ ಒಳಭಾಗದಲ್ಲಿರುವ ಮುಖ್ಯ ರಸ್ತೆಗೆ ತೇಪೆ ಕಾಮಗಾರಿ ನಡೆಸದೆ ಪೂರ್ಣ ಡಾಮರೀಕರಣ ನಡೆಸುವಂತೆ ಸ್ಥಳೀಯ ಸಾರ್ವಜನಿಕರು ಪಿಡಬ್ಲುಡಿ ಅಧಿಕಾರಿಗಳಿಗೆ ನೀಡಿದ ಮನವಿ ಬಗ್ಗೆ ಕರಾವಳಿ ಟೈಮ್ಸ್ ವರದಿಗೆ ಸ್ಪಂದಿಸಿದ ಬಂಟ್ವಾಳ ಲೋಕೋಪಯೋಗಿ ಇಲಾಖಾಧಿಕಾರಿಗಳು ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇಲ್ಲಿನ ಮುಖ್ಯ ರಸ್ತೆ ಡಾಮರೀಕರಣ ಕಾಣದೆ ಹಲವು ವರ್ಷಗಳೇ ಕಳೆದರೂ ಅಧಿಕಾರಿಗಳು ಸ್ಪಂದಿಸದೆ ಮೀನಮೇಷ ಎಣಿಸುತ್ತಿದ್ದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಡಿಸೆಂಬರ್ 6 ರಂದು ತೇಪೆ ಕಾಮಗಾರಿ ನಡೆಸಲು ಬಂದಿದ್ದ ಪಿಡಬ್ಲುಡಿ ಗುತ್ತಿಗೆದಾರರನ್ನು ನಾಗರಿಕರು ವಾಪಾಸು ಕಳಿಸಿದ್ದಲ್ಲದೆ ರಸ್ತೆ ದುರಸ್ತಿಯಲ್ಲಿ ದ್ವಂದ್ವ ನೀತಿ ಅನುಸರಿಸದೆ ಪೂರ್ಣ ಡಾಮರೀಕರಣ ನಡೆಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಕರಾವಳಿ ಟೈಮ್ಸ್ ಸಚಿತ್ರ ವರದಿ ಪ್ರಕಟಿಸಿ ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ಎಚ್ಚರಿಸಿತ್ತು.
ಈ ಬಗ್ಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಬಂಟ್ವಾಳ ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಜಯಪ್ರಕಾಶ್ ಹಾಗೂ ಅಭಿಯಂತರ ಅರುಣ್ ಪ್ರಕಾಶ್ ಡಿ ಸೋಜ ಅವರು ಪರಿಶೀಲನೆ ನಡೆಸಿದ್ದು, ಸದ್ಯಕ್ಕೆ ತೇಪೆ ಕಾಮಗಾರಿ ನಡೆಸಲು ಅವಕಾಶ ಇದೆ. ಇದನ್ನು ಮಾಡಲು ಇಲಾಖೆ ಸಿದ್ದವಿದೆ. ಪೂರ್ಣ ಡಾಮರೀಕರಣದ ಬೇಡಿಕೆ ಬಗ್ಗೆ ಸಾರ್ವಜನಿಕರ ಮನವಿಯನ್ನು ಸರಕಾರಕ್ಕೆ ಸಲ್ಲಿಸಿ ಈ ಬಗ್ಗೆ ಕೋರಿಕೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
0 comments:
Post a Comment