ಬಂಟ್ವಾಳ, ಜನವರಿ 15, 2025 (ಕರಾವಳಿ ಟೈಮ್ಸ್) : ತಾಲೂಕಿನ ನಾವೂರು ಗ್ರಾಮದ ಸ್ಮಶಾನ ಉದ್ಘಾಟನೆಗೆ ಮುನ್ನವೇ ಇಲ್ಲಿನ ಚಿತಾಗಾರದ ಕಬ್ಬಿಣದ ಬಕೆಟ್ ಗಳನ್ನೇ ಕಳ್ಳರು ಕದ್ದುಕೊಂಡು ಹೋಗಿರುವ ಪರಿಣಾಮ ಸ್ಮಶಾನ ಲೋಕಾರ್ಪಣೆ ಭಾಗ್ಯ ಕಾಣದೆ ಪೊದೆಯೊಳಗೆ ಅವಿತುಕೊಳ್ಳುವಂತಾಗಿದೆ.
ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಇಲ್ಲಿನ ಹಿಂದೂ ರುದ್ರಭೂಮಿ ಇದೀಗ ಪ್ರಯೋಜನಕ್ಕೆ ಬಾರದ ಸ್ಥಿತಿಯಲ್ಲಿದೆ. ರುದ್ರಭೂಮಿ ನಿರ್ಮಾಣವಾಗಿ ಇನ್ನೇನು ಉದ್ಘಾಟನೆಗೊಳ್ಳಬೇಕು ಎನ್ನುವಷ್ಟರಲ್ಲಿ ಚಿತಾಗಾರಕ್ಕೆ ಅಳವಡಿಸಿರುವ ಹೆಣವನ್ನು ಸುಡುವ ಎರಡೂ ಬದಿಯ ಕಬ್ಬಿಣ ಬಕೆಟ್ ಗಳನ್ನು ಕಳ್ಳರು ಕದ್ದುಕೊಂಡು ಹೋಗಿದ್ದಾರೆ. ಬಳಿಕ ಈ ಬಗ್ಗೆ ಹೇಳುವ-ಕೇಳುವ ಸ್ಥಿತಿ ಇಲ್ಲದೆ ರುದ್ರಭೂಮಿಯೇ ನಿಷ್ಪ್ರಯೋಜಕವಾಗಿದೆ.
ಸರಕಾರದ 80 ಸೆಂಟ್ಸ್ ಜಾಗದಲ್ಲಿ ನಾವೂರ ಪಂಚಾಯತ್ ಹಿಂದೂ ರುದ್ರ ಭೂಮಿಯನ್ನು ಮೀಸಲಿಟ್ಟಿದ್ದು, ಮೂರು ವರ್ಷಗಳ ಹಿಂದೆ ರುದ್ರಭೂಮಿಯ ಕಾಮಗಾರಿ ಸಿದ್ಧತೆ ನಡೆಸಿದೆ. ರುದ್ರಭೂಮಿ ನಿರ್ಮಾಣಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯತ್ ಎನ್ ಆರ್ ಇ ಜಿ ಯೋಜನೆ ನಿಧಿಯಿಂದ ಸ್ಮಶಾನ ನಿರ್ಮಾಣ ಮಾಡಲಾಗಿತ್ತು. ಇದರಲ್ಲಿ ಒಂದು ಹೆಣ ಸುಡುವ ಚಿತಾಗಾರ, ಕಟ್ಟಿಗೆ ಶೇಖರಣೆ ಇಡುವ ಆರ್ ಸಿ ಸಿ ಕಟ್ಟಡ ಸಹಿತ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಒಳಗೊಂಡಿತ್ತು. ಕೇವಲ ವಿದ್ಯುತ್ ಮತ್ತು ನೀರಿನ ಸಂಪರ್ಕ ಬಾಕಿಯಾಗಿತ್ತು. ಅದನ್ನು ಮಾಡುವಷ್ಟರಲ್ಲಿ ಸ್ಮಶಾನದಲ್ಲಿ ಹೆಣ ಸುಡುವ ಕಬ್ಬಿಣದ ಚಿತಾಗಾರದ ಎರಡು ಕಬ್ಬಿಣ ಬಕೆಟನ್ನೇ ಕಳ್ಳರು ಕದ್ದೊಯ್ದಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನಕ್ಕೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯರು.
ಬಂಟ್ವಾಳ-ಸರಪಾಡಿ ರಸ್ತೆಯ ಮಣಿಹಳ್ಳ ಜಂಕ್ಷನ್ನಿನಿಂದ ಕೆಲವೇ ದೂರದಲ್ಲಿ ನಿರ್ಮಿಸಲಾದ್ದ ಈ ಸ್ಮಶಾನ ಹಳೆಗೇಟು, ಮಲೆಬಾವ್, ಕೀಲ್ತೋಡಿ, ಕೊಪ್ಪಲ, ಕನಪಾದೆ, ಅಜಂಕೋಡಿ, ನಾವೂರ ಬೀದಿ, ಮೈಂದಾಲ, ಪಕಲಬೆಟ್ಟು, ನಾವೂರ ಅದರ್ಗಳ, ಸಜಂಕಬೆಟ್ಟು ಭಾಗದ ಗ್ರಾಮಸ್ಥರಿಗೆ ಅನುಕೂಲವಾಗಲಿತ್ತು. ಆದರೆ ಇದು ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿದೆ. ಇದೀಗ ಈ ಪ್ರದೇಶದಲ್ಲಿ ಪೊದೆ-ಗಿಡಗಳು ಆವೃತವಾಗಿದ್ದು, ಕಸಗಳ ರಾಶಿ, ಮಣ್ಣಿನ ರಾಶಿ ಇದೆ. ಮತ್ತೊಂದು ಬದಿಯಲ್ಲಿ ಅಡಿಕೆ ಸಸಿಗಳನ್ನು ನೆಟ್ಟಿರುವುದು ಕಂಡುಬರುತ್ತಿದ್ದು, ಜಾಗದಲ್ಲಿ ಅತಿಕ್ರಮಣದ ಭೀತಿಯೂ ಎದುರಾಗಿದೆ. ಈ ಸ್ಮಶಾನವನ್ನು ಸುವ್ಯವ್ಯವಸ್ಥಿತವಾಗಿ ಲೋಕಾರ್ಪಣೆಗೊಳಿಸಿದರೆ ಈ ಭಾಗದ ಹಿಂದೂ ಬಾಂಧವರು ಮೃತದೇಹಗಳ ಅಂತ್ಯಕ್ರಿಯೆಗಾಗಿ ಬಂಟ್ವಾಳದಲ್ಲಿರುವ ಸ್ಮಶಾನವನ್ನು ಅವಲಂಬಿಸುವುದು ಕಡಿಮೆಯಾಗುತ್ತದೆ. ಇದರಿಂದ ಬಂಟ್ವಾಳದಲ್ಲಿ ಒತ್ತಡವೂ ಕಡಿಮೆಯಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟವರು ಶೀಘ್ರ ಗಮನ ಹರಿಸಿ ವ್ಯವಸ್ಥೆಯನ್ನು ಸರಿಪಡಿಸುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
0 comments:
Post a Comment