ಬಂಟ್ವಾಳ, ಜನವರಿ 08, 2025 (ಕರಾವಳಿ ಟೈಮ್ಸ್) : ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ತನಿಖಾ ನೆಪದಲ್ಲಿ ಹಣ ದರೋಡೆಯಾಗಿರುವ ಬಂಟ್ವಾಳ ತಾಲೂಕಿನ ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ಮನೆಗೆ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು ಟಿ ಅಬ್ದುಲ್ ಖಾದರ್ ಫರೀದ್ ಅವರು ಬುಧವಾರ ಭೇಟಿ ನೀಡಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಹಿತ ಪೊಲೀಸ್ ಅಧಿಕಾರಿಗಳ ಹಾಗೂ ಮನೆ ಮಂದಿ ಜೊತೆ ಸಮಾಲೋಚನೆ ನಡೆಸಿ ತನಿಖಾ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಪ್ರತಿಕ್ರಯಿಸಿದ ಸ್ಪೀಕರ್ ಖಾದರ್ ತನಿಖೆ ಇನ್ನಷ್ಟು ತೀವ್ರಗೊಳಿಸಲು ಪೊಲೀಸ್ ಇಲಾಖೆಯು ಆಧುನಿಕ ತಂತ್ರಜ್ಞಾನದೊಂದಿಗೆ ಉನ್ನತ ಮಟ್ಟದ ತನಿಖೆ ನಡೆಸುತ್ತಿದೆ. ಇದಕ್ಕೆ ಊರವರ ಮತ್ತು ಮನೆಯವರ ಸಹಕಾರ ಅಗತ್ಯ. ಈಗಾಗಲೇ ಡಿವೈಎಸ್ಪಿ ನೇತೃತ್ವದ 4 ತಂಡಗಳನ್ನು ರಚಿಸಲಾಗಿದೆ. ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಶೀಘ್ರವೇ ದರೋಡೆಕೋರರ ಪತ್ತೆ ಹಚ್ಚುವಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಎಸ್ಪಿ ಯತೀಶ್ ಎನ್, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್, ಮನೆ ಮಾಲಿಕ ಸುಲೈಮಾನ್ ಹಾಜಿ, ಅವರ ಪುತ್ರ ಮುಹಮ್ಮದ್ ಇಕ್ಬಾಲ್ ಅವರ ಜೊತೆ ಸ್ಪೀಕರ್ ಖಾದರ್ ಸಮಾಲೋಚನೆ ನಡೆಸಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಎಚ್ ಇ ನಾಗರಾಜ್, ಪಿಎಸ್ಸೈ ವಿದ್ಯಾ ಈ ಸಂದರ್ಭ ಜೊತೆಗಿದ್ದರು.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ನಿವಾಸಿ, ಸಿಂಗಾರಿ ಬೀಡಿ ಮಾಲಕ ಸುಲೈಮಾನ್ ಹಾಜಿ ಅವರ ನಾರ್ಶದ ಮನೆಗೆ ಜನವರಿ 3 ರಂದು ಶುಕ್ರವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ತಮಿಳುನಾಡು ನೋಂದಾಯಿತ ಮಾರುತಿ ಎರ್ಟಿಗಾ ಕಾರಿನಲ್ಲಿ ಆಗಮಿಸಿದ ಸುಮಾರು 6 ಮಂದಿಯ ತಂಡ ನುಗ್ಗಿದ್ದು, ಇಡಿ ಅಧಿಕಾರಿಗಳು ಎಂದು ನಂಬಿಸಿ ಸುಮಾರು ಎರಡೂವರೆ ಗಂಟೆಗಳ ಕಾಲ ತನಿಖೆಯ ನಾಟಕವಾಡಿ ಮನೆಯಲ್ಲಿದ್ದ ಭಾರೀ ಪ್ರಮಾಣದ ನಗದು ಹಣ ಹಾಗೂ ಮನೆ ಮಂದಿಯ ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದರು. ಬಳಿಕ ದರೋಡೆಕೋರರು ಕೊಂಡು ಹೋಗಿದ್ದ ಮೊಬೈಲ್ ಪೊನ್ ಗಳು ಮನೆಯಲ್ಲೇ ಮಂಗಳವಾರ ಪತ್ತೆಯಾಗಿತ್ತು.
0 comments:
Post a Comment